ರೇಣುಕಾಸ್ವಾಮಿ ಪ್ರಕರಣ: ದರ್ಶನ್‌ಗೆ ಹಿನ್ನಡೆ; ಖುದ್ದು ಹಾಜರಿ ಅರ್ಜಿ ತಿರಸ್ಕಾರ
ಬೆಂಗಳೂರು:
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಅವಕಾಶ ನೀಡುವಂತೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ವಜಾಗೊಳಿಸಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಆದೇಶ ಪ್ರಕಟಿಸಿ, ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಖುದ್ದು ಹಾಜರಿಗೆ ಅವಕಾಶ ನೀಡುವಂತೆ ವಾದಿಸಿದ್ದರು. ಸಾಕ್ಷ್ಯ ವಿಚಾರಣೆ ವೇಳೆ ನ್ಯಾಯಾಲಯದ ಸೂಚನೆಗಳನ್ನು ನೇರವಾಗಿ ಪಡೆಯಲು ಅನುಕೂಲವಾಗಲಿದೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ವೇಳೆ ವಕೀಲರೊಂದಿಗೆ ಸಮಾಲೋಚನೆ ನಡೆಸಲು ಸೂಕ್ತ ಹೆಡ್‌ಫೋನ್ ಹಾಗೂ ಸಂಪರ್ಕ ವ್ಯವಸ್ಥೆ ಇಲ್ಲ ಎಂದು ವಾದಿಸಿದ್ದರು.
ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಿಗೆ ಕಾನೂನಿನಲ್ಲಿ ಅವಕಾಶವಿದೆ. ದರ್ಶನ್ ಅವರನ್ನು ಖುದ್ದಾಗಿ ಕರೆತಂದರೆ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದರು.
ವಾದ ಆಲಿಸಿದ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಇದೀಗ ಅರ್ಜಿ ವಜಾಗೊಂಡಿರುವುದು ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ.
ಆದರೆ, ಆರೋಪಿಗಳು ವಕೀಲರೊಂದಿಗೆ ಗೌಪ್ಯವಾಗಿ ಮಾತನಾಡಲು ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಕೋರ್ಟ್ ಸೂಚಿಸಿದೆ. ಸಾಕ್ಷ್ಯ ವಿಚಾರಣೆಗೆ ಮೊದಲು, ವೇಳೆ ಹಾಗೂ ಬಳಿಕ ಅಗತ್ಯವಿದ್ದಾಗ ವಕೀಲರೊಂದಿಗೆ ಸಂಪರ್ಕಿಸಲು ಅವಕಾಶ ನೀಡಬೇಕು. ಸಾಕ್ಷಿಗಳ ಹೇಳಿಕೆ ಸ್ಪಷ್ಟವಾಗಿ ಕೇಳುವಂತೆ ತಾಂತ್ರಿಕ ವ್ಯವಸ್ಥೆ ಕಲ್ಪಿಸುವಂತೆಯೂ ನಿರ್ದೇಶನ ನೀಡಲಾಗಿದೆ.