Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಹೆಚ್ಚಿಸಿ: ನೀತಿ ಆಯೋಗಕ್ಕೆ ಕುರುಬೂರು ಶಾಂತಕುಮಾರ್ ಪತ್ರ

By ANU News
October 29, 2026 2 Min Read
0

ಬೆಂಗಳೂರು: ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಒದಗಿಸುವುದು, ಸಕ್ಕರೆ ಕಾರ್ಖಾನೆಗಳಿಂದ ನಡೆಯುತ್ತಿರುವ ಶೋಷಣೆ ತಡೆಯುವುದು ಹಾಗೂ ರೈತರ ಬಾಕಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಅವರು ನೀತಿ ಆಯೋಗದ ಸದಸ್ಯರು ಹಾಗೂ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕೃಷಿ ಉತ್ಪಾದನಾ ವೆಚ್ಚ, ಕೂಲಿ, ಗೊಬ್ಬರ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಣೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೇ.10.25ರ ಸಕ್ಕರೆ ಇಳುವರಿ ಪ್ರಮಾಣಕ್ಕೆ ಅನ್ವಯವಾಗುವಂತೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ)ಯನ್ನು ಪ್ರತಿ ಟನ್‌ಗೆ ಕನಿಷ್ಠ ₹4,500ಕ್ಕೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹಿಂದಿನ ವರ್ಷ ಒಂದು ಟನ್ ಕಬ್ಬು ಉತ್ಪಾದಿಸಲು ₹4,450 ವೆಚ್ಚವಾಗುತ್ತದೆ ಎಂದು ರಾಜ್ಯದ ಕಬ್ಬು ಅಭಿವೃದ್ಧಿ ಆಯುಕ್ತರು ವರದಿ ನೀಡಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಕ್ಕರೆಯ ಶೇ.75ರಷ್ಟು ವಾಣಿಜ್ಯ ಬಳಕೆಗೆ ಹಾಗೂ ಶೇ.25ರಷ್ಟು ಗೃಹಬಳಕೆಗೆ ಬಳಸಲಾಗುತ್ತದೆ ಎಂದು ಉಲ್ಲೇಖಿಸಿರುವ ಶಾಂತಕುಮಾರ್, ಸಿಹಿತಿಂಡಿ ತಯಾರಿಕಾ ಘಟಕಗಳು, ತಂಪು ಪಾನೀಯ ಕಂಪನಿಗಳು ಮತ್ತು ಆಹಾರ ಸಂಸ್ಕರಣಾ ಉದ್ಯಮಗಳಿಗೆ ಹೆಚ್ಚಿನ ದರ ನಿಗದಿಪಡಿಸಬೇಕು. ಇದರಿಂದ ದೊರೆಯುವ ಹೆಚ್ಚುವರಿ ಆದಾಯದ ಒಂದು ಭಾಗವನ್ನು ಕಬ್ಬು ಬೆಳೆಗಾರರ ಎಫ್‌ಆರ್‌ಪಿ ಹೆಚ್ಚಳಕ್ಕೆ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರ ಬೇಡಿಕೆಗಳೇನು?

  • ಉಪ ಉತ್ಪನ್ನಗಳ ಲಾಭ ಹಂಚಿಕೆ: ಮೊಲಾಸಿಸ್, ಬಗಾಸ್, ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನೆಯಿಂದ ಕಾರ್ಖಾನೆಗಳಿಗೆ ದೊರೆಯುವ ಹೆಚ್ಚುವರಿ ಆದಾಯದಲ್ಲಿ ರೈತರಿಗೂ ಪಾಲು ನೀಡಬೇಕು.
  • ಪ್ರತ್ಯೇಕ ಇಳುವರಿ ಪರೀಕ್ಷೆ: ಪ್ರತಿ ರೈತನ ಹೊಲದ ಕಬ್ಬಿನ ಸಕ್ಕರೆ ಇಳುವರಿಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಅದರ ಆಧಾರದಲ್ಲಿ ಎಫ್‌ಆರ್‌ಪಿ ನಿಗದಿಪಡಿಸಬೇಕು.
  • ತೂಕ ಕಡಿತಕ್ಕೆ ಕಡಿವಾಣ: ಕಟಾವು ಯಂತ್ರ ಬಳಕೆಯ ಸಂದರ್ಭದಲ್ಲಿ ವೇಸ್ಟೇಜ್ ಹೆಸರಿನಲ್ಲಿ ಶೇ.8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ತಡೆಯಬೇಕು.
  • ಹೊಲದಲ್ಲಿಯೇ ಬೆಲೆ ನಿಗದಿ: ಎಫ್‌ಆರ್‌ಪಿಯನ್ನು ಹೊಲದಲ್ಲಿನ ದರವಾಗಿ (Ex-field Price) ನಿಗದಿಪಡಿಸಿ, ಕಟಾವು ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸಬೇಕು.
  • ಪ್ರಸಕ್ತ ವರ್ಷದ ಇಳುವರಿಗೆ ಆದ್ಯತೆ: ಹಿಂದಿನ ವರ್ಷದ ಇಳುವರಿ ಆಧರಿಸುವ ಬದಲು, ಆಯಾ ವರ್ಷದ ಕಬ್ಬಿನ ಇಳುವರಿ ಆಧಾರದಲ್ಲಿ ದರ ನಿಗದಿಪಡಿಸಿ ಹಣ ಪಾವತಿಸಬೇಕು.
  • 14 ದಿನಗಳಲ್ಲಿ ಪಾವತಿ: ಕಬ್ಬು ಪೂರೈಕೆಯಾದ 14 ದಿನಗಳೊಳಗೆ ಹಣ ಪಾವತಿಸಬೇಕು. ವಿಳಂಬಕ್ಕೆ ಬಡ್ಡಿ ವಿಧಿಸಿ, ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
  • ಬಾಕಿ ವಸೂಲಿಗೆ ಅಧಿಕಾರ: ರೈತರ ಹಣ ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಕ್ತ ಕಾನೂನುಬದ್ಧ ಅಧಿಕಾರ ನೀಡಬೇಕು.
  • ಬೆಂಕಿಯಿಂದ ಹಾನಿಗೆ ಪರಿಹಾರ: ಆಕಸ್ಮಿಕ ಬೆಂಕಿ ಅಥವಾ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟ ಕಬ್ಬಿಗೆ ಕಂದಾಯ ಇಲಾಖೆ ನೀಡುವ ಪರಿಹಾರವನ್ನು ವೈಜ್ಞಾನಿಕವಾಗಿ ಹೆಚ್ಚಿಸಬೇಕು. ಸುಟ್ಟ ಕಬ್ಬನ್ನು ನುರಿಸಿದಾಗ ಎಫ್‌ಆರ್‌ಪಿಯಲ್ಲಿ ಶೇ.25 ಕಡಿತ ಮಾಡುವ ನಿಯಮ ರದ್ದುಪಡಿಸಬೇಕು.
  • ಮುಕ್ತ ಮಾರುಕಟ್ಟೆ: ಸಕ್ಕರೆಯನ್ನು ಅಗತ್ಯ ವಸ್ತುಗಳ ಕಾಯ್ದೆಯ ವ್ಯಾಪ್ತಿಯಿಂದ ತೆಗೆದು ಮುಕ್ತ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಕೇಂದ್ರ ಸರ್ಕಾರ ಈ ಬೇಡಿಕೆಗಳ ಕುರಿತು ತುರ್ತು ಕ್ರಮ ಕೈಗೊಂಡು ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಬೇಕು ಎಂದು ಕುರುಬೂರು ಶಾಂತಕುಮಾರ್ ಮನವಿ ಮಾಡಿದ್ದಾರೆ.

Author

ANU News

Follow Me
Other Articles
Previous

Supreme Court flags steep cancer drug mark-ups as NPPA revises prices of 543 brands

Next

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಶೂನ್ಯ ಸ್ಥಾನ, ಅಮಿತ್ ಶಾ ವ್ಯಂಗ್ಯ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Ballot papers, zero seats: Amit Shah takes a swipe at Congress after MLC results
    • ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ಗೆ ಶೂನ್ಯ ಸ್ಥಾನ, ಅಮಿತ್ ಶಾ ವ್ಯಂಗ್ಯ
    • ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಹೆಚ್ಚಿಸಿ: ನೀತಿ ಆಯೋಗಕ್ಕೆ ಕುರುಬೂರು ಶಾಂತಕುಮಾರ್ ಪತ್ರ
    • Supreme Court flags steep cancer drug mark-ups as NPPA revises prices of 543 brands
    • ಕ್ಯಾನ್ಸರ್ ರೋಗಿಗಳಿಗೆ ಬೆಲೆ ನಿಯಂತ್ರಣದ ನಿರೀಕ್ಷೆ: ಎಲ್ಲ ಔಷಧಗಳ ದರವೂ ಇಳಿಯಲ್ಲ!
    Copyright 2026 — ANU News. All rights reserved. Blogsy WordPress Theme