ಪ್ರಧಾನಿ ಮೋದಿಗೆ ಡಿಕೆಶಿ ಮನವಿ; ಮೆಟ್ರೋ ಯೋಜನೆ, ಬರ ಪರಿಹಾರಕ್ಕೆ ತ್ವರಿತ ಅನುಮೋದನೆಗೆ ಆಗ್ರಹ
ಬೆಂಗಳೂರು: ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು ಮೆಟ್ರೋ ಹಂತ 3ಎ ಅಡಿಯಲ್ಲಿ ಪ್ರಸ್ತಾವಿತ ಸರ್ಜಾಪುರ–ಹೆಬ್ಬಾಳ ಕೆಂಪು ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಒತ್ತಾಯಿಸಿದ್ದಾರೆ. ಮೆಟ್ರೋ ಯೋಜನೆಗಳಿಗೆ ಕೇಂದ್ರ-ರಾಜ್ಯ ಸಮಾನ ಹಣಕಾಸು ವ್ಯವಸ್ಥೆ, ಕಡಿಮೆ ಬಡ್ಡಿದರದ ದೀರ್ಘಾವಧಿ ಸಾಲ ಹಾಗೂ ತ್ವರಿತ ಅನುಮತಿ ವ್ಯವಸ್ಥೆ ಕಲ್ಪಿಸುವಂತೆಯೂ ಕೋರಿದ್ದಾರೆ. ಮೆಟ್ರೋಗಳಿಗಾಗಿ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಸ್ಥಾಪನೆ ಮತ್ತು ಸಾಧ್ಯವಿರುವ ಕಡೆ ಡಬಲ್ ಡೆಕ್ಕರ್ ರಸ್ತೆ-ಮೆಟ್ರೋ ಯೋಜನೆಗಳಿಗೆ ಅವಕಾಶ ನೀಡುವಂತೆ ಪ್ರಸ್ತಾಪಿಸಿದ್ದಾರೆ.
ಬರದಿಂದ ಬೆಳೆ ನಷ್ಟ, ಕುಡಿಯುವ ನೀರು ಮತ್ತು ಮೇವಿನ ಕೊರತೆ ಎದುರಿಸುತ್ತಿರುವ ರೈತರ ನೆರವಿಗಾಗಿ ₹22,400.58 ಕೋಟಿ ಎನ್ಡಿಆರ್ಎಫ್ ಪರಿಹಾರವನ್ನು ತ್ವರಿತವಾಗಿ ಅನುಮೋದಿಸಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

2026-27ನೇ ಸಾಲಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಪ್ರತಿ ಟನ್ಗೆ ₹3,650 ನಿಗದಿಪಡಿಸುವಂತೆ ರೈತರ ಬೇಡಿಕೆಯನ್ನು ಪ್ರಸ್ತಾಪಿಸಿದ್ದಾರೆ. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ ಹಾಗೂ ಎಥೆನಾಲ್ ಸೇರಿದಂತೆ ಉಪ ಉತ್ಪನ್ನಗಳ ಆದಾಯ ಪರಿಗಣಿಸುವ ನೀತಿ ಬದಲಾವಣೆಗೂ ಒತ್ತಾಯಿಸಿದ್ದಾರೆ.
ಪಶ್ಚಿಮ ಘಟ್ಟಗಳ ಕಸ್ತೂರಿರಂಗನ್ ವರದಿ ಆಧಾರಿತ ಪರಿಸರ ಸೂಕ್ಷ್ಮ ಪ್ರದೇಶ ಅಧಿಸೂಚನೆಯನ್ನು ಮರುಪರಿಶೀಲಿಸಿ, ಸ್ಥಳೀಯರ ಜೀವನೋಪಾಯ ರಕ್ಷಿಸಲು ರಾಜ್ಯದೊಂದಿಗೆ ಸಮಾಲೋಚನೆ ನಡೆಸುವಂತೆ ಕೋರಿದ್ದಾರೆ.
ರಾಜ್ಯದ ಅಭಿವೃದ್ಧಿ, ರೈತರ ಹಿತಾಸಕ್ತಿ ಮತ್ತು ಜನರ ಜೀವನೋಪಾಯ ರಕ್ಷಣೆಗೆ ಕೇಂದ್ರದೊಂದಿಗೆ ಸಹಕರಿಸಲು ಕರ್ನಾಟಕ ಸಿದ್ಧವಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.