ಮತದಾರರ ಪಟ್ಟಿ ಪರಿಷ್ಕರಣೆ: ನಿಖರತೆ ಜತೆಗೆ ಅರ್ಹರ ಸೇರ್ಪಡೆಗೆ ಆದ್ಯತೆ
ನವದೆಹಲಿ: ಮತದಾರರ ಪಟ್ಟಿಯ ನಿಖರತೆ ಹೆಚ್ಚಿಸುವುದರ ಜತೆಗೆ ಯಾವುದೇ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ರಾಷ್ಟ್ರವ್ಯಾಪಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪ್ರಮುಖ ಸವಾಲಾಗಿದೆ.
ಹಳೆಯ, ನಕಲಿ ಹಾಗೂ ಅಮಾನ್ಯವಾಗಿರುವ ಸಾಧ್ಯತೆಯಿರುವ ಮತದಾರರ ಹೆಸರುಗಳನ್ನು ಗುರುತಿಸುವ ಉದ್ದೇಶದಿಂದ ಭಾರತೀಯ ಚುನಾವಣಾ ಆಯೋಗ (ECI) ಈ ಪ್ರಕ್ರಿಯೆ ಕೈಗೊಂಡಿದೆ. ಅಕ್ಟೋಬರ್ 7ರಂದು ಬಿಡುಗಡೆಯಾದ ಆಯೋಗದ ಅಂಕಿಅಂಶಗಳ ಪ್ರಕಾರ, ಮೂರು ಹಂತಗಳಲ್ಲಿ ಒಟ್ಟು 13.39 ಕೋಟಿ ಮತದಾರರನ್ನು ಅನುಪಸ್ಥಿತ, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ ಮತದಾರರು (ASDD) ಸೇರಿದಂತೆ ಸಂಬಂಧಿತ ವರ್ಗಗಳಡಿ ಗುರುತಿಸಲಾಗಿದೆ.
ಇವರಲ್ಲಿ 6.30 ಕೋಟಿ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 3.01 ಕೋಟಿ ಮಂದಿ ಗೈರುಹಾಜರಾದವರು ಅಥವಾ ಪತ್ತೆಯಾಗದವರು, 2.80 ಕೋಟಿ ಮಂದಿ ಮೃತಪಟ್ಟವರು ಹಾಗೂ 1.02 ಕೋಟಿ ಮಂದಿ ನಕಲಿ ಮತದಾರರು ಎಂದು ವರ್ಗೀಕರಿಸಲಾಗಿದೆ.
ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದರಿಂದ ಮತದಾನದ ಹಕ್ಕು ಶಾಶ್ವತವಾಗಿ ರದ್ದಾಗುವುದಿಲ್ಲ. ನಿಗದಿತ ಕಾರ್ಯವಿಧಾನದ ಮೂಲಕ ಅರ್ಹ ನಾಗರಿಕರು ತಮ್ಮ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

ಬಿಹಾರದಲ್ಲಿ ಕಾನೂನುಬದ್ಧತೆಗೆ ನ್ಯಾಯಾಲಯದ ಮನ್ನಣೆ
ಸಾಮಾನ್ಯ ಸಂಕ್ಷಿಪ್ತ ಪರಿಷ್ಕರಣೆಗಿಂತ ಭಿನ್ನವಾಗಿ, SIR ಪ್ರಕ್ರಿಯೆಯಲ್ಲಿ ಕ್ಷೇತ್ರಮಟ್ಟದ ವ್ಯಾಪಕ ಪರಿಶೀಲನೆ ನಡೆಯುತ್ತದೆ. ನಗರೀಕರಣ, ವಲಸೆ, ವರದಿಯಾಗದ ಸಾವುಗಳು ಮತ್ತು ನಕಲಿ ಅಥವಾ ದೋಷಪೂರಿತ ನಮೂದುಗಳನ್ನು ಗಮನದಲ್ಲಿಟ್ಟುಕೊಂಡು ಬಿಹಾರದಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಅಲ್ಲಿ 2003ರಲ್ಲಿ ಕೊನೆಯ ಬಾರಿಗೆ ವಿಶೇಷ ತೀವ್ರ ಪರಿಷ್ಕರಣೆ ನಡೆದಿತ್ತು.
ಬಿಹಾರದ ಪರಿಷ್ಕರಣೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಮೇ 27, 2026ರಂದು ನೀಡಿದ ತೀರ್ಪಿನಲ್ಲಿ, ಸಂವಿಧಾನದ ವಿಧಿ 324 ಹಾಗೂ ಜನಪ್ರತಿನಿಧಿ ಕಾಯ್ದೆ, 1950ರ ಸೆಕ್ಷನ್ 21(3)ರ ಅಡಿಯಲ್ಲಿ ಪರಿಷ್ಕರಣೆ ನಡೆಸುವ ಚುನಾವಣಾ ಆಯೋಗದ ಅಧಿಕಾರವನ್ನು ನ್ಯಾಯಾಲಯ ಎತ್ತಿಹಿಡಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಲವು ರಾಜ್ಯಗಳಿಗೆ ವಿಸ್ತರಣೆ
ಮೇ ತಿಂಗಳಲ್ಲಿ ಆಯೋಗವು 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಮೂರನೇ ಹಂತದ ಪರಿಷ್ಕರಣೆ ಘೋಷಿಸಿತ್ತು. ಈ ಹಂತದಲ್ಲಿ 36.73 ಕೋಟಿ ಮತದಾರರನ್ನು ಒಳಗೊಳ್ಳುವ ಉದ್ದೇಶದೊಂದಿಗೆ 3.94 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳು (BLA) ಭಾಗವಹಿಸಿದ್ದರು ಎಂದು ಆಯೋಗ ತಿಳಿಸಿದೆ.
ಇನ್ನೊಂದೆಡೆ, ವಿರೋಧ ಪಕ್ಷಗಳು ಮತ್ತು ನಾಗರಿಕ ಸಮಾಜದ ಸಂಘಟನೆಗಳು ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಕೈಬೀಳುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಇದಕ್ಕೆ ಪ್ರತಿಯಾಗಿ ಆಯೋಗವು ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ಒತ್ತಿಹೇಳಿದೆ. SIR ಪೂರ್ಣಗೊಂಡ ರಾಜ್ಯಗಳಲ್ಲಿ ಎಡವಟ್ಟಿನಿಂದ ಹೊರಗುಳಿದ ಮತದಾರರು, ಯುವಕರು ಹಾಗೂ ಮೊದಲ ಬಾರಿಗೆ ಮತದಾನ ಮಾಡುವವರನ್ನು ಗುರುತಿಸಿ ಪಟ್ಟಿಗೆ ಸೇರಿಸಲು ವಿಶೇಷ ಅಭಿಯಾನಕ್ಕೂ ಸೂಚಿಸಿದೆ.
ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕಾಪಾಡುವುದರ ಜತೆಗೆ ಅರ್ಹ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಮುಖ್ಯವಾಗಿದೆ. ಪಾರದರ್ಶಕ ಪರಿಶೀಲನೆ, ದೂರುಗಳ ತ್ವರಿತ ವಿಲೇವಾರಿ ಮತ್ತು ಹೆಸರು ಸೇರ್ಪಡೆಗೆ ಸಮರ್ಪಕ ಅವಕಾಶ ಕಲ್ಪಿಸುವುದು ಈ ಪ್ರಕ್ರಿಯೆಯ ಯಶಸ್ಸಿಗೆ ನಿರ್ಣಾಯಕವಾಗಲಿದೆ.