ತಮಿಳುನಾಡು ಸಚಿವ ಆಧವ್ ಅರ್ಜುನ್ ದಾಂಪತ್ಯ ಜೀವನದಲ್ಲಿ ಬಿರುಕು: 14 ವರ್ಷಗಳ ಬಳಿಕ ವಿಚ್ಛೇದನ ಘೋಷಣೆ
ಚೆನ್ನೈ: ತಮಿಳುನಾಡು ಸಚಿವ ಹಾಗೂ ಮುಖ್ಯಮಂತ್ರಿ ವಿಜಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಧವ್ ಅರ್ಜುನ್ ಮತ್ತು ಅವರ ಪತ್ನಿ ಡೈಸಿ ಮಾರ್ಟಿನ್ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿರುವುದಾಗಿ ಡೈಸಿ ಮಾರ್ಟಿನ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ತಮಿಳುನಾಡು ಸರ್ಕಾರದಲ್ಲಿ ಲೋಕೋಪಯೋಗಿ ಮತ್ತು ಕ್ರೀಡಾ ಸಚಿವರಾಗಿರುವ ಆಧವ್ ಅರ್ಜುನ್ ಅವರು ಖ್ಯಾತ ಲಾಟರಿ ಉದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ ಅವರ ಪುತ್ರಿ ಡೈಸಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇತ್ತೀಚೆಗೆ ಆಧವ್ ಅರ್ಜುನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ಡೈಸಿ ಭಾಗವಹಿಸಿದ್ದರು.
ಇದೀಗ ದಾಂಪತ್ಯ ಜೀವನದಿಂದ ದೂರವಾಗುವ ನಿರ್ಧಾರವನ್ನು ಡೈಸಿ ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸಿದ್ದಾರೆ.
“ಕಳೆದ 14 ವರ್ಷಗಳಿಂದ ನಾವು ಪರಸ್ಪರರ ಜೀವನದ ಭಾಗವಾಗಿದ್ದೇವೆ. ಪ್ರೀತಿ, ತಿಳುವಳಿಕೆ ಮತ್ತು ಬದಲಾವಣೆಗಳಿಂದ ಕೂಡಿದ ಈ ಪಯಣದಲ್ಲಿ ಸ್ನೇಹಿತರು, ಜೀವನ ಸಂಗಾತಿಗಳು ಮತ್ತು ಪೋಷಕರಾಗಿ ಹಲವು ಹಂತಗಳನ್ನು ದಾಟಿದ್ದೇವೆ.

ಆದರೆ ಇದೀಗ ಆಧವ್ ಅರ್ಜುನ್ ಮತ್ತು ನಾನು ಪರಸ್ಪರ ಬೇರ್ಪಟ್ಟು ಪ್ರತ್ಯೇಕ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದೇವೆ. ಇದು ನಮ್ಮಿಬ್ಬರಿಗೂ ಹೊಸ ಆರಂಭವಾಗಿದ್ದರೂ, ನಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮಗುವಿನ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆಯಾಗಿರಲಿದೆ” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಆಧವ್ ಅರ್ಜುನ್ ಅವರ ಬಗ್ಗೆ ತಮಗೆ ಸದಾ ಗೌರವವಿದೆ ಎಂದು ಹೇಳಿರುವ ಡೈಸಿ, ಅವರ ಮುಂದಿನ ಪ್ರಯತ್ನಗಳಿಗೆ ಸಂತೋಷ, ಶಾಂತಿ ಮತ್ತು ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಈ ಬದಲಾವಣೆಯ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಬದುಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 14 ವರ್ಷಗಳ ದಾಂಪತ್ಯದ ಬಳಿಕ ಇಬ್ಬರೂ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡಿರುವುದು ಇದೀಗ ತಮಿಳುನಾಡಿನ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.