ತೆಲಂಗಾಣದಲ್ಲಿ ಗಿಗ್ ಕಾರ್ಮಿಕರಿಗೆ ಕಲ್ಯಾಣ ಕಾನೂನು ಜಾರಿ; ₹5 ಲಕ್ಷ ಜೀವ ವಿಮೆ, ₹10 ಲಕ್ಷ ಆರೋಗ್ಯ ವಿಮೆ
ಹೈದರಾಬಾದ್: ತೆಲಂಗಾಣದಲ್ಲಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಿರುವ ಹೊಸ ಕಾನೂನನ್ನು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಜಾರಿಗೆ ತಂದರು. ಇದರಡಿ ಅರ್ಹ ಕಾರ್ಮಿಕರಿಗೆ ₹5 ಲಕ್ಷ ಜೀವ ವಿಮೆ ಮತ್ತು ₹10 ಲಕ್ಷ ಆರೋಗ್ಯ ವಿಮೆ ಸೌಲಭ್ಯ ದೊರೆಯಲಿದೆ.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಹೈಟೆಕ್ ಸಿಟಿ ಸಮೀಪದ ಜಯಭೇರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಹಾಗೂ ಆನ್‌ಲೈನ್ ನೋಂದಣಿ ಪೋರ್ಟಲ್ ಉದ್ಘಾಟಿಸಲಾಯಿತು. ಕಾನೂನು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ರೇವಂತ್ ರೆಡ್ಡಿ ತಿಳಿಸಿದರು.
ಹೊಸ ನೀತಿಯಡಿ ಗಿಗ್ ಕಾರ್ಮಿಕರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ರಚನೆ ಮತ್ತು ವಿಶೇಷ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತದೆ. ರಾಜೀವ್ ಆರೋಗ್ಯಶ್ರೀ ಯೋಜನೆಯ ಮೂಲಕ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತದೆ.

ಇದಕ್ಕೂ ಮುನ್ನ ರೇವಂತ್ ರೆಡ್ಡಿ ಮತ್ತು ರಾಹುಲ್ ಗಾಂಧಿ ಅವರು ಸಚಿವರು ಹಾಗೂ ಗಿಗ್ ಕಾರ್ಮಿಕರೊಂದಿಗೆ ಶಿಲ್ಪಾರಾಮದಿಂದ ಕಾರ್ಯಕ್ರಮದ ಸ್ಥಳದವರೆಗೆ ನಡೆದ ಮೋಟಾರ್‌ಸೈಕಲ್ ರ್ಯಾಲಿಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್ ಆಧಾರಿತ ಕಾರ್ಮಿಕರಿಗಾಗಿ ರೂಪಿಸಿರುವ ನಿಯಮಾವಳಿಗಳ ಪುಸ್ತಕವನ್ನೂ ಮುಖ್ಯಮಂತ್ರಿ ಬಿಡುಗಡೆ ಮಾಡಿದರು.
ಗಿಗ್ ಕಾರ್ಮಿಕರ ಪ್ರತಿನಿಧಿಗಳು ಮತ್ತು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಐಐಟಿಯಂತಹ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತ ನಿಖಿಲ್ ಅವರ ಸಹಕಾರದೊಂದಿಗೆ ಕಾನೂನು ರೂಪಿಸಲಾಗಿದೆ ಎಂದು ರೇವಂತ್ ರೆಡ್ಡಿ ಹೇಳಿದರು.
ಕರ್ತವ್ಯ ನಿರ್ವಹಿಸುವ ವೇಳೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಗಿಗ್ ಕಾರ್ಮಿಕರ ಕುಟುಂಬಗಳಿಗೆ ತಲಾ ₹5 ಲಕ್ಷ ಆರ್ಥಿಕ ನೆರವನ್ನೂ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ರಾಜ್ಯ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಅಧಿಕಾರಿಗಳು ಹಾಗೂ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಪ್ರತಿನಿಧಿಗಳು ಉಪಸ್ಥಿತರಿದ್ದರು.