ಸಮಸ್ಯೆ ಬಗೆಹರಿಸಲಾಗದಿದ್ದರೆ ಹೆಸರು ಬದಲಿಸೋಣ’: ಹಾರ್ಮುಜ್ ಜಲಸಂಧಿಗೆ ಟ್ರಂಪ್ ಹೆಸರು!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ತಮ್ಮ ವಿಚಿತ್ರ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಅಮೆರಿಕ-ಇರಾನ್ ಸಂಘರ್ಷದ ನಡುವೆಯೇ ಇದೀಗ ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ Strait of Hormuzಗೆ ತಮ್ಮ ಹೆಸರಿಡುವ ಪ್ರಸ್ತಾಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ‘Trump Strait’ ಎಂದು ಮರುನಾಮಕರಣ ಮಾಡಬಹುದೇ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದರ ಹೆಸರನ್ನಾದರೂ ಬದಲಿಸಬಹುದು ಎಂಬುದು ಟ್ರಂಪ್ ಅವರ ತರ್ಕವಾಗಿದೆ.
ಟ್ರಂಪ್ ಅವರ ‘ಹೆಸರು ಬದಲಾವಣೆ’ ಆಸಕ್ತಿ ಇದೇ ಮೊದಲೇನಲ್ಲ. 2025ರ ಜನವರಿಯಲ್ಲಿ ಅವರು Gulf of Mexico ಅನ್ನು ‘Gulf of America’ ಎಂದು ಮರುನಾಮಕರಣ ಮಾಡುವ ಆದೇಶ ಹೊರಡಿಸಿದ್ದರು.
ಇದಾದ ಬಳಿಕ ಕೆನಡಾ ವಿಚಾರದಲ್ಲೂ ಹೆಸರು ಬದಲಾವಣೆಯ ಪ್ರಯತ್ನ ನಡೆದಿತ್ತು. ಅಮೆರಿಕದೊಂದಿಗೆ ಕೆನಡಾ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಟ್ರಂಪ್, Lake Ontarioಗೆ ‘Lake America’ ಎಂಬ ಹೆಸರು ಬಳಸುವ ಪ್ರಸ್ತಾಪ ಮಾಡಿದ್ದರು.
ಟ್ರಂಪ್ ಆಡಳಿತದ ಈ ಹೆಸರು ಬದಲಾವಣೆ ನಿರ್ಧಾರಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆದರೆ ಗೂಗಲ್ ಮತ್ತು ಆಪಲ್ ಸೇರಿದಂತೆ ಕೆಲವು ಟೆಕ್ ಕಂಪನಿಗಳು ತಮ್ಮ ಮ್ಯಾಪ್ ಸೇವೆಗಳಲ್ಲಿ ಅಮೆರಿಕ ಸರ್ಕಾರದ ಅಧಿಕೃತ ಹೆಸರುಗಳನ್ನು ಅಳವಡಿಸಿಕೊಂಡಿದ್ದವು.
ಇದೀಗ ಹಾರ್ಮುಜ್ ಜಲಸಂಧಿಗೂ ತಮ್ಮ ಹೆಸರಿಡುವ ಟ್ರಂಪ್ ಪ್ರಸ್ತಾಪ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯ ಹೆಸರನ್ನು ಬದಲಿಸುವ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರುವುದೇ ಎಂಬುದು ಸದ್ಯದ ಕುತೂಹಲ.