ಸಕ್ಕರೆ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
ನವದೆಹಲಿ: ಹಬ್ಬದ ಸೀಸನ್‌ಗೂ ಮುನ್ನ ಸಕ್ಕರೆ ಬೆಲೆ ಏರಿಕೆ ಹಾಗೂ ದಾಸ್ತಾನು ಕುಸಿತದ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಸರ್ಕಾರದ ನೀತಿಗಳ “ಕಹಿ” ಸಕ್ಕರೆಯ “ಸಿಹಿ”ಯಲ್ಲೂ ಸೇರಿದೆ ಎಂದು ಟೀಕಿಸಿ ಕೇಂದ್ರದ ಮುಂದೆ ಮೂರು ಪ್ರಶ್ನೆಗಳನ್ನು ಇಟ್ಟಿದ್ದಾರೆ.

ಭಾರತದ ಸಕ್ಕರೆ ದಾಸ್ತಾನು 9 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದೇಕೆ ಎಂದು ಪ್ರಶ್ನಿಸಿರುವ ಅವರು, ರಫ್ತು ನಿಲ್ಲಿಸಿ 10 ಲಕ್ಷ ಟನ್ ಸಕ್ಕರೆಯನ್ನು ಸುಂಕಮುಕ್ತವಾಗಿ ಆಮದು ಮಾಡಿಕೊಳ್ಳುವ ಅಗತ್ಯ ಏಕೆ ಬಂತು ಎಂದು ಕೇಳಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಸಕ್ಕರೆ ಬೆಲೆ ಸುಮಾರು 40% ಏರಿಕೆಯಾಗಿದೆ ಎಂದು ಖರ್ಗೆ ಆರೋಪಿಸಿದ್ದು, ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಹೊರೆ ಗ್ರಾಹಕರ ಮೇಲೆ ಬೀಳಲು ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ ಮಾಡುವ E20 ನೀತಿಯನ್ನೂ ಅವರು ಪ್ರಶ್ನಿಸಿದ್ದಾರೆ. ಸಕ್ಕರೆ ಲಭ್ಯತೆ ಕುರಿತು ಆತಂಕವಿರುವಾಗ ಕಬ್ಬು ಮತ್ತು ಧಾನ್ಯಗಳನ್ನು ಎಥನಾಲ್ ಉತ್ಪಾದನೆಗೆ ಬಳಸುವುದನ್ನು ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
त्योहारों से पहले चीनी की मिठास में मोदी सरकार की नीतियों की कड़वाहट घुल गई है।
मोदी सरकार से 3 सीधे सवाल:
1. दुनिया के बड़े चीनी उत्पादक और निर्यातक भारत में आज चीनी का स्टॉक 9 साल के निचले स्तर पर क्यों है? नौबत निर्यात रोकने और 10 लाख टन चीनी duty-free आयात करने तक कैसे… pic.twitter.com/hO9wLYgVWN
— Mallikarjun Kharge (@kharge) August 22, 2026
ಆದರೆ ಎಥನಾಲ್ ಉತ್ಪಾದನೆಯಿಂದ ಸಕ್ಕರೆ ಬೆಲೆ ಏರಿಕೆಯಾಗಿದೆ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಜುಲೈ 20ರಂದು ಕೆ.ಜಿ.ಗೆ ₹48.18 ಇದ್ದ ಸಕ್ಕರೆ ಬೆಲೆ ಆಗಸ್ಟ್ 20ಕ್ಕೆ ₹55.70ಕ್ಕೆ ಏರಿಕೆಯಾಗಿದೆ.
ಕಡಿಮೆ ಉತ್ಪಾದನೆ, ಹಬ್ಬದ ಬೇಡಿಕೆ, ಹವಾಮಾನ ಹಾನಿ, ಜಾಗತಿಕ ಪೂರೈಕೆ ಕೊರತೆ ಹಾಗೂ ಸಂಗ್ರಹಣೆಯಿಂದ ಬೆಲೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.