ತೆಲಂಗಾಣ ಲೋಕ್ ಅದಾಲತ್‌ನಲ್ಲಿ 1.51 ಲಕ್ಷ ಪ್ರಕರಣ ಇತ್ಯರ್ಥ
ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ 3,896 ಸೈಬರ್ ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 1,51,164 ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಸೆ.3ರಿಂದ 12ರವರೆಗೆ ನಡೆದ ಇತ್ಯರ್ಥ ಪ್ರಕ್ರಿಯೆಯಲ್ಲಿ ವಿವಿಧ ಕಾನೂನು ವಿವಾದಗಳನ್ನು ಪರಸ್ಪರ ಒಪ್ಪಂದದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಯಿತು. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡುವುದರ ಜತೆಗೆ, ದಾವೆದಾರರ ಸಮಯ ಮತ್ತು ಹಣವನ್ನು ಉಳಿಸುವುದು ಲೋಕ್ ಅದಾಲತ್‌ನ ಪ್ರಮುಖ ಉದ್ದೇಶವಾಗಿತ್ತು.
ಸೈಬರ್ ವಂಚನೆಗೆ ಸಂಬಂಧಿಸಿದ 3,896 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಸಂತ್ರಸ್ತರಿಗೆ ಒಟ್ಟು ₹42.29 ಕೋಟಿ ಮರುಪಾವತಿಸಲಾಗಿದೆ. ಇತ್ಯರ್ಥಕ್ಕೆ ಅರ್ಹ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗುರುತಿಸಿ, ಸಂಬಂಧಪಟ್ಟ ಎರಡೂ ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಿತ್ತು.

ಇತ್ಯರ್ಥಗೊಂಡ ಪ್ರಕರಣಗಳಲ್ಲಿ 21,843 ಎಫ್‌ಐಆರ್ ಪ್ರಕರಣಗಳು, 1,404 ವಿಪತ್ತು ನಿರ್ವಹಣೆ ಪ್ರಕರಣಗಳು, 61,052 ಸಣ್ಣಪುಟ್ಟ ಪ್ರಕರಣಗಳು ಹಾಗೂ 62,969 ಮೋಟಾರು ವಾಹನ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಸೇರಿವೆ.
ತೆಲಂಗಾಣ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮನ್ವಯದ ಪ್ರಯತ್ನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರ ಕಚೇರಿ ತಿಳಿಸಿದೆ.