ಬ್ರಿಟಿಷರ ದೌರ್ಜನ್ಯ ವಿರುದ್ಧದ ಹೋರಾಟದ ಕಥೆ; ವಿಜಯ್-ರಶ್ಮಿಕಾ ಜೋಡಿಯ ‘ರಣಬಾಲಿ’ ಟೀಸರ್ ಬಿಡುಗಡೆ;
ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಬಹುನಿರೀಕ್ಷಿತ ಐತಿಹಾಸಿಕ ಆ್ಯಕ್ಷನ್–ಡ್ರಾಮಾ ‘ರಣಬಾಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಸಿನಿಮಾ ದಸರಾ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 16ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗುತ್ತಿದೆ.
‘ದಿ ಸ್ಯಾವೇಜಸ್ ಓತ್’ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಟೀಸರ್ ಸಿನಿಮಾದ ಕಥಾಹಂದರದ ಬಗ್ಗೆ ಕುತೂಹಲ ಮೂಡಿಸಿದೆ. 1876–1878ರ ಅವಧಿಯಲ್ಲಿ ಸಂಭವಿಸಿದ ‘ಮದ್ರಾಸ್ ಕ್ಷಾಮ’ದ ಹಿನ್ನೆಲೆಯನ್ನು ಚಿತ್ರ ಹೊಂದಿದೆ. ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ನಡೆದ ದೌರ್ಜನ್ಯ ಮತ್ತು ಅದರ ವಿರುದ್ಧ ಸ್ಥಳೀಯರು ನಡೆಸಿದ ಹೋರಾಟವನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.

ಟೀಸರ್‌ನಲ್ಲಿ ಬ್ರಿಟಿಷ್ ಅಧಿಕಾರಿಗಳ ಕ್ರೌರ್ಯ ಹಾಗೂ ಅವರ ವಿರುದ್ಧ ಬಂಡೆದ್ದ ಜನರ ಹೋರಾಟದ ದೃಶ್ಯಗಳು ಗಮನ ಸೆಳೆಯುತ್ತವೆ. ಭಾರತದಲ್ಲಿ ಬ್ರಿಟಿಷರ ಆಡಳಿತದ ಅವಧಿಯಲ್ಲಿ ನಡೆದ ಅಮಾನವೀಯ ಘಟನೆಗಳ ಹಿನ್ನೆಲೆಯನ್ನು ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ.
ಹಾಲಿವುಡ್‌ನ ‘ದಿ ಮಮ್ಮಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ಆರ್ನಾಲ್ಡ್ ವೋಸ್ಲೂ ಅವರು ‘ರಣಬಾಲಿ’ಯಲ್ಲಿ ಸರ್ ಥಿಯೋಡೋರ್ ಹೆಕ್ಟರ್ ಎಂಬ ಕ್ರೂರ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರದ ಝಲಕ್ ಕೂಡ ಚಿತ್ರತಂಡ ಹಂಚಿಕೊಂಡಿದೆ.
ರಾಯಲಸೀಮೆಯ ಮಣ್ಣಿನ ಮಗ ‘ರಣಬಾಲಿ’ಯಾಗಿ ವಿಜಯ್ ದೇವರಕೊಂಡ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೋರಾಟದ ಹಿನ್ನೆಲೆಯ ಶಕ್ತಿಶಾಲಿ ಪಾತ್ರದಲ್ಲಿ ಅವರು ಮಿಂಚಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ವಿಜಯ್ ಅವರ ಪತ್ನಿ ಜಯಮ್ಮ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಪತಿಯ ಹೋರಾಟದಲ್ಲಿ ಜತೆಯಾಗುವ ಪ್ರಮುಖ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.
ಅಕ್ಟೋಬರ್ 16ರಂದು ಚಿತ್ರವನ್ನು ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.