Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಇನ್ನು ಮುಂದೆ ರಾಜ್ಯ ಸರ್ಕಾರದಿಂದಲೇ ಆ್ಯಂಬುಲೆನ್ಸ್‌ ಮೇಲ್ವಿಚಾರಣೆ

By ANU News
May 26, 2026 2 Min Read
0

ಬೆಂಗಳೂರು: ರಾಜ್ಯದ ಜನತೆಗೆ ತುರ್ತು ಸಮಯದಲ್ಲಿ ಅತ್ಯಂತ ಗುಣಮಟ್ಟದ ಹಾಗೂ ಪಾರದರ್ಶಕ ವೈದ್ಯಕೀಯ ಸೇವೆ ತಲುಪಿಸುವುದು ನಮ್ಮ ಸರ್ಕಾರದ ಪರಮೋಚ್ಚ ಧ್ಯೇಯ. ಇವತ್ತು ಇಡೀ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ‘108’ ಕೇಂದ್ರಿಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಸ್ತೆ ಅಪಘಾತಗಳು, ಹೆರಿಗೆ ಅಥವಾ ಹೃದಯರೋಗದಂತಹ ಕ್ಲಿಷ್ಟ ಸಂದರ್ಭಗಳಲ್ಲಿ ಆ ‘ಗೋಲ್ಡನ್ ಅವರ್’ ಚಿಕಿತ್ಸೆ ಜೀವ ಉಳಿಸಲು ಅತ್ಯಂತ ನಿರ್ಣಾಯಕ. ಇಂತಹ ತುರ್ತು ಸಂದರ್ಭದಲ್ಲಿ ಶೇ.80 ರಷ್ಟು ಜನರನ್ನು ಬದುಕಿಸಲು ಈ ನೂತನ ತಂತ್ರಜ್ಞಾನದ ಕೇಂದ್ರ ನೆರವಾಗಲಿದೆ. ಸಾರ್ವಜನಿಕರು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚಕ್ಕೆ ಹೆದರಿ ತೊಂದರೆಗೆ ಸಿಲುಕುವ ಬದಲು, ಧೈರ್ಯವಾಗಿ ನಮ್ಮ ಅತ್ಯಾಧುನಿಕ ಸೌಲಭ್ಯವುಳ್ಳ ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕು. ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಜನರಲ್ಲಿ ಪ್ರಾಮಾಣಿಕವಾಗಿ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಆರೋಗ್ಯ ಸಚಿವನಾಗಿ ಈ ಯೋಜನೆ ಜಾರಿಗೆ ಬಂದಿರುವುದು ಅತ್ಯಂತ ಹೆಮ್ಮೆ ಮತ್ತು ಸಾರ್ಥಕತೆಯ ಕ್ಷಣವಾಗಿದೆ. ನಾವು 2023ರಲ್ಲಿ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ‘108’ ಆ್ಯಂಬುಲೆನ್ಸ್ ಸೇವೆಗಳ ಬಗ್ಗೆ ಜನರಲ್ಲಿ ತುಂಬಾ ಅಸಮಾಧಾನ ಇತ್ತು. ಕರೆ ಮಾಡಿದರೆ ಸಮಯಕ್ಕೆ ಆ್ಯಂಬುಲೆನ್ಸ್ ಸಿಗುತ್ತಿರಲಿಲ್ಲ, ಹಳ್ಳಿಗಳಲ್ಲಿ ಜನ ರಸ್ತೆಯಲ್ಲೇ ತೊಂದರೆ ಅನುಭವಿಸುತ್ತಿದ್ದರು. ಖಾಸಗಿಯವರ ಕೈಯಲ್ಲಿದ್ದ ಈ ಜೀವ ರಕ್ಷಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ, ಸಂಪೂರ್ಣವಾಗಿ ಸರ್ಕಾರದ ಅಧೀನಕ್ಕೆ ತರಲೇಬೇಕು ಎನ್ನುವುದು ನನ್ನ ಪಾಲಿನ ಒಂದು ದೊಡ್ಡ ಕನಸಾಗಿತ್ತು. ನಮ್ಮ ಸರ್ಕಾರದ ಬಜೆಟ್ ಅನುದಾನದೊಂದಿಗೆ ಇವತ್ತು ಆ ಕನಸು ನನಸಾಗಿದೆ ಎಂದರು.

ಇನ್ನು ಮುಂದೆ ಆ್ಯಂಬುಲೆನ್ಸ್‌ಗಳಲ್ಲಿರುವ ಎಂಡಿಟಿ ತಂತ್ರಜ್ಞಾನ ಮತ್ತು ಸಂಪೂರ್ಣ ತಾಂತ್ರಿಕ ಮೇಲ್ವಿಚಾರಣೆಯನ್ನು ಸರ್ಕಾರದ ಕಡೆಯಿಂದಲೇ ನೇರವಾಗಿ ಮಾನಿಟರಿಂಗ್ ಮಾಡಲಾಗುವುದು. ಖಾಸಗಿಯವರ ಮೇಲಿನ ಅವಲಂಬನೆಯನ್ನು ಮುಕ್ತಾಯಗೊಳಿಸಲಾಗಿದ್ದು, ಸಾರ್ವಜನಿಕರ ಪ್ರತಿಯೊಂದು ಮಾಹಿತಿಯ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು ಇಲಾಖೆ ಸರ್ವಸನ್ನದ್ಧವಾಗಿದೆ. ಕೇವಲ ತಂತ್ರಜ್ಞಾನವನ್ನಷ್ಟೇ ಬದಲಾಯಿಸದೆ, ನಮ್ಮ ರಾಜ್ಯದ 3600 ಜನರಿಗೆ ನಮ್ಮ ಇಲಾಖೆಯಿಂದಲೇ ನೇರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟು, ಆ ಕುಟುಂಬಗಳ ಬದುಕಿಗೆ ಆಸರೆಯಾಗಿದ್ದೇವೆ ಎನ್ನುವ ದೊಡ್ಡ ತೃಪ್ತಿ ನಮಗಿದೆ ಎಂದವರು ತಿಳಿಸಿದರು.

ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ಹೊತ್ತ ಈ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ, ನಾವು ಬರೀ ಭರವಸೆಗಳನ್ನು ನೀಡಿಲ್ಲ. ಜನಸಾಮಾನ್ಯರ ಆರೋಗ್ಯ ಹಕ್ಕನ್ನು ಎತ್ತಿಹಿಡಿಯುವ ಇಂತಹ ಹತ್ತಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇವತ್ತು ನಮಗೊಂದು ಸಾರ್ಥಕತೆಯ ಹೆಮ್ಮೆಯಿದೆ, ಹಾಗೆಯೇ ಈ ಹೆಮ್ಮೆಯೊಂದಿಗೆ ನಮ್ಮ ಹೊಣೆಗಾರಿಕೆಯೂ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬ ಬಡವನಿಗೂ ಅತ್ಯುನ್ನತ ವೈದ್ಯಕೀಯ ಸೇವೆ ಸಿಗುವಂತೆ ಮಾಡಲು ಮತ್ತಷ್ಟು ಘನ ಯೋಜನೆಗಳೆಡೆಗೆ ನಮ್ಮ ಚಿಂತನೆ ಮತ್ತು ಕಾರ್ಯಗಳು ಸಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಶಾಸಕರಾದ ಸುರೇಶ್ ಕುಮಾರ್, ಪ್ರಿಯಾಕೃಷ್ಣ ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿ ರುತ್ವಿತ್ ರಂಜನ್, ಕಮಾಂಡ್ ಕಂಟ್ರೋಲ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಾಹಕ ವಿಪುಲ್ ಬನ್ಸಾಲ್ ಸಿಂಗ್‌ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Bengaluru-Tumakuru Metro DPR submitted; 60-km corridor planned under PPP model

Next

ನನಸಾಗುವತ್ತ ಬೆಂಗಳೂರು-ತುಮಕೂರು ಮೆಟ್ರೋ ಕನಸು; ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme