ನೀಟ್ ವಿವಾದದ ಪ್ರತಿಧ್ವನಿ; ‘ಚಲೋ ಸಂಸದ್’ ಮೆರವಣಿಗೆ ವೇಳೆ ಲಾಠಿ ಚಾರ್ಜ್
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗುತ್ತಿದ್ದಂತೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ಪರೀಕ್ಷಾ ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಯಿತು.
ಜಂತರ್ ಮಂತರ್ನಿಂದ ಸಂಸತ್ತಿನತ್ತ ಮೆರವಣಿಗೆ ( ‘ಚಲೋ ಸಂಸದ್’) ನಡೆಸಲು ಪ್ರತಿಭಟನಾಕಾರರು ಯತ್ನಿಸಿದ ವೇಳೆ ಪೊಲೀಸರು ತಡೆದಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ಹಾಗೂ ತಳ್ಳಾಟ ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಪ್ರತಿಭಟನಾ ಸ್ಥಳದಲ್ಲಿ ಹಲವು ರಾಜಕೀಯ ನಾಯಕರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಆಜಾದ್ ಸಮಾಜ ಪಾರ್ಟಿ-ಕಾನ್ಶಿರಾಮ್ ಅಧ್ಯಕ್ಷ ಹಾಗೂ ಸಂಸದ ಚಂದ್ರಶೇಖರ್ ಆಜಾದ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಭದ್ರತಾ ಕಾರಣಗಳಿಂದ ಸಂಸತ್ ಪ್ರದೇಶದಲ್ಲಿ ಮೆರವಣಿಗೆಗೆ ಪೂರ್ವಾನುಮತಿ ನೀಡಲಾಗಿರಲಿಲ್ಲ. ಪ್ರತಿಭಟನಾ ಪ್ರದೇಶದ ಹೊರಗೆ ಐದಕ್ಕಿಂತ ಹೆಚ್ಚು ಜನರು ಸೇರದಂತೆ ನಿರ್ಬಂಧ ಹೇರಲಾಗಿತ್ತು. ಆದೇಶ ಉಲ್ಲಂಘಿಸಿ ಸಂಸತ್ ಕಡೆಗೆ ತೆರಳಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಕಾನೂನು ಸುವ್ಯವಸ್ಥೆ ಕಾಪಾಡಲು ನಾಗರಿಕರು ಅನಧಿಕೃತ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು ಹಾಗೂ ಪೊಲೀಸರೊಂದಿಗೆ ಸಹಕರಿಸುವಂತೆ ದೆಹಲಿ ಪೊಲೀಸರು ಮನವಿ ಮಾಡಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.