ಪಾಕಿಸ್ತಾನದ ರಾಕ್ ಸಾಲ್ಟ್ ಕಳ್ಳಸಾಗಣೆ ಜಾಲ ಭೇದಿಸಿದ ಡಿಆರ್ಐ; ನಾಲ್ವರ ಬಂಧನ
ನವದೆಹಲಿ: ಪಾಕಿಸ್ತಾನ ಮೂಲದ ರಾಕ್ ಸಾಲ್ಟ್ (ಕಲ್ಲು ಉಪ್ಪು) ಅನ್ನು ಮೂರನೇ ದೇಶಗಳ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳುವ ಮೂಲಕ ಮೂಲ ದೇಶದ ಗುರುತನ್ನು ಮರೆಮಾಚುತ್ತಿದ್ದ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಪತ್ತೆಹಚ್ಚಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಸುಮಾರು ₹30 ಕೋಟಿ ಮಾರುಕಟ್ಟೆ ಮೌಲ್ಯದ 7,311 ಮೆಟ್ರಿಕ್ ಟನ್ ಉಪ್ಪನ್ನು ಸಾಗಿಸುತ್ತಿದ್ದ 295 ಕಂಟೈನರ್ಗಳನ್ನು ಪತ್ತೆಮಾಡಲಾಗಿದೆ.
‘ಆಪರೇಷನ್ ಡೀಪ್ ಮ್ಯಾನಿಫೆಸ್ಟ್’ ಅಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನಿ ಸರಕುಗಳ ಮೇಲಿನ ಭಾರತದ ಆಮದು ನಿಷೇಧವನ್ನು ತಪ್ಪಿಸಲು ನಕಲಿ ಮೂಲ ಪ್ರಮಾಣಪತ್ರಗಳು ಮತ್ತು ಇನ್ವಾಯ್ಸ್ಗಳನ್ನು ಬಳಸಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಯುಎಇ ಮೂಲದ ಸಂಸ್ಥೆಗಳು ನೀಡಿದ ದಾಖಲೆಗಳನ್ನು ಬಳಸಿಕೊಂಡು, ಶ್ರೀಲಂಕಾದ ಕೊಲಂಬೊ ಬಂದರಿನ ಮೂಲಕ ಸರಕುಗಳನ್ನು ಸಾಗಿಸಲಾಗಿದೆ ಎಂದು ಡಿಆರ್ಐ ಆರೋಪಿಸಿದೆ.
ಖಚಿತ ಮಾಹಿತಿಯ ಆಧಾರದಲ್ಲಿ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 11, 2026ರವರೆಗೆ ಎರಡು ವಾರಗಳ ಕಾಲ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಗಾಂಧಿಧಾಮ, ಆದಿಪುರ, ವೆರಾವಲ್, ಪಾಣಿಪತ್, ಪುಣೆ, ಪಟಿಯಾಲ, ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದರು.

ತನಿಖೆಯ ಪ್ರಕಾರ, 2026ರ ಮಾರ್ಚ್ನಿಂದ ಒಂಬತ್ತು ಆಮದುದಾರರು ಮುಂದ್ರಾ ಮತ್ತು ಕಂಡ್ಲಾ ಬಂದರುಗಳ ಮೂಲಕ ಒಟ್ಟು 295 ಕಂಟೈನರ್ಗಳನ್ನು ಆಮದು ಮಾಡಿಕೊಂಡಿದ್ದಾರೆ. ಕಂಡ್ಲಾ ಬಂದರಿನಲ್ಲಿ ₹24.41 ಲಕ್ಷ ಮೌಲ್ಯದ 140 ಮೆಟ್ರಿಕ್ ಟನ್ ರಾಕ್ ಸಾಲ್ಟ್ ಹೊಂದಿದ್ದ ಐದು ಕಂಟೈನರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆಮದುದಾರರ ಬ್ಯಾಂಕ್ ಖಾತೆಗಳಲ್ಲಿದ್ದ ಮಾರಾಟದ ಆದಾಯದ ₹20.96 ಲಕ್ಷವನ್ನೂ ಜಪ್ತಿ ಮಾಡಲಾಗಿದೆ.
ಪಾಕಿಸ್ತಾನ, ಯುಎಇ, ಶ್ರೀಲಂಕಾ ಮತ್ತು ಭಾರತದ ಪ್ರಜೆಗಳಿಗೆ ಸೇರಿದ ಸಂಸ್ಥೆಗಳು ಈ ಜಾಲದಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ಡಿಆರ್ಐ ತಿಳಿಸಿದೆ. ಸಾಗಣೆಗೆ ಸಂಬಂಧಿಸಿದ ಕೆಲವು ದಾಖಲೆಗಳಲ್ಲಿ ಪಾಕಿಸ್ತಾನವನ್ನು ಮೂಲ ದೇಶವೆಂದು ಹಾಗೂ ಭಾರತವನ್ನು ಅಂತಿಮ ಗಮ್ಯಸ್ಥಾನವೆಂದು ನಮೂದಿಸಲಾಗಿತ್ತು. ಆದರೆ, ಆಮದುದಾರರು ಸಲ್ಲಿಸಿದ್ದ ಮೂಲ ಪ್ರಮಾಣಪತ್ರಗಳು ನಕಲಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಸಂಸ್ಥೆ ಹೇಳಿದೆ.
ಕಸ್ಟಮ್ಸ್ ಕಾಯಿದೆ, 1962ರ ಅಡಿಯಲ್ಲಿ ಬಂಧಿತರಾಗಿರುವ ನಾಲ್ವರಲ್ಲಿ ಇಬ್ಬರು ಆಮದು ಸಂಸ್ಥೆಗಳ ಮಾಲೀಕರು ಅಥವಾ ಪಾಲುದಾರರು, ಕಸ್ಟಮ್ಸ್ ಬ್ರೋಕರ್ನ ಜಿ-ಕಾರ್ಡ್ ಹೊಂದಿರುವ ವ್ಯಕ್ತಿ ಮತ್ತು ದುಬೈ ಮೂಲದ ಪೂರೈಕೆದಾರ ಸೇರಿದ್ದಾರೆ. ಈ ಪೂರೈಕೆದಾರರು ತಮ್ಮ ತಂದೆಯ ಹೆಸರಿನಲ್ಲಿ ಆಮದು ಸಂಸ್ಥೆಯೊಂದನ್ನು ಸ್ಥಾಪಿಸಿ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಇದಕ್ಕೂ ಮೊದಲು, ನಾಸಿಕ್ನ ಅಂಬಾದ್ನಲ್ಲಿರುವ ಕಂಟೈನರ್ ಫ್ರೈಟ್ ಸ್ಟೇಷನ್ನಲ್ಲಿ ಪಾಕಿಸ್ತಾನ ಮೂಲದ 362 ಟನ್ಗಿಂತಲೂ ಹೆಚ್ಚು ಒಣ ಖರ್ಜೂರ ಹೊಂದಿದ್ದ 13 ಕಂಟೈನರ್ಗಳನ್ನು ಡಿಆರ್ಐ ವಶಪಡಿಸಿಕೊಂಡಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ, 2025ರ ಮೇ 2ರಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್ಟಿ) ಹೊರಡಿಸಿದ ಅಧಿಸೂಚನೆಯ ಮೂಲಕ ಪಾಕಿಸ್ತಾನ ಮೂಲದ ಅಥವಾ ಪಾಕಿಸ್ತಾನದಿಂದ ರಫ್ತಾಗುವ ಸರಕುಗಳ ನೇರ ಹಾಗೂ ಪರೋಕ್ಷ ಆಮದು ಮತ್ತು ಸಾಗಣೆಯನ್ನು ಭಾರತ ನಿಷೇಧಿಸಿತ್ತು.
ಮೂರನೇ ದೇಶಗಳ ಮಾರ್ಗ, ಸುಳ್ಳು ಘೋಷಣೆಗಳು ಮತ್ತು ನಕಲಿ ವ್ಯಾಪಾರ ದಾಖಲೆಗಳ ಮೂಲಕ ಈ ನಿಷೇಧವನ್ನು ಉಲ್ಲಂಘಿಸುವ ಜಾಲಗಳ ವಿರುದ್ಧ ಕ್ರಮ ಮುಂದುವರಿಸುವುದಾಗಿ ಡಿಆರ್ಐ ತಿಳಿಸಿದೆ.