ಲೈವ್ ವರದಿ ವೇಳೆ ಹೆಲಿಕಾಪ್ಟರ್ ಪತನ; ಮೂವರ ಸಾವು
ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಲೈವ್ ಸುದ್ದಿ ವರದಿ ಮಾಡುತ್ತಿದ್ದ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿ ಪಾರ್ಕಿಂಗ್ ಲಾಟ್ಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ ಮೂವರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಯಾನ್ ಫೆರ್ನಾಂಡೋ ಕಣಿವೆಯ ಚಾಟ್ಸ್ವರ್ತ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ್ದ ಬಸ್-ಎಸ್ಯುವಿ ಅಪಘಾತದ ದೃಶ್ಯಗಳನ್ನು ‘ಎನ್ಬಿಸಿ ನ್ಯೂಸ್’ಗಾಗಿ ಹೆಲಿಕಾಪ್ಟರ್ ಮೂಲಕ ಚಿತ್ರೀಕರಿಸಲಾಗುತ್ತಿತ್ತು. ಸಂಜೆ ಸುಮಾರು 7 ಗಂಟೆ ವೇಳೆಗೆ ಹೆಲಿಕಾಪ್ಟರ್ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕಟ್ಟಡವೊಂದರ ಪಾರ್ಕಿಂಗ್ ಸ್ಥಳಕ್ಕೆ ಅಪ್ಪಳಿಸಿದೆ.
ಘಟನೆಯ ದೃಶ್ಯಗಳು ಹೆಲಿಕಾಪ್ಟರ್ನಲ್ಲಿದ್ದ ಕ್ಯಾಮೆರಾದಲ್ಲಿ ದಾಖಲಾಗಿವೆ. ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಾರ್ಕಿಂಗ್ ಲಾಟ್ನಲ್ಲಿದ್ದ ನಾಲ್ಕು ಕಾರುಗಳು ಹಾಗೂ ಎರಡು ಶೇಖರಣಾ ಕಂಟೈನರ್ಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಎನ್ಬಿಸಿ ವಾಹಿನಿಯ ಲೈವ್ ಪ್ರಸಾರದ ವೇಳೆ ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸುದ್ದಿ ನಿರೂಪಕಿ ಕಾಲೀನ್ ವಿಲಿಯಮ್ಸ್ ಭಾವುಕರಾಗಿ ಪ್ರಸಾರವನ್ನು ಸ್ಥಗಿತಗೊಳಿಸಿದರು.
ಹೆಲಿಕಾಪ್ಟರ್ನಲ್ಲಿ ಎಷ್ಟು ಮಂದಿ ಇದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತಪಟ್ಟವರಲ್ಲಿ ಕನಿಷ್ಠ ಒಬ್ಬರು ಪಾರ್ಕಿಂಗ್ ಸ್ಥಳದಲ್ಲಿದ್ದ ನಾಗರಿಕ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಇದೇ ವೇಳೆ, ಮಂಗಳವಾರ ಮುಂಜಾನೆ ಲಾಸ್ ಏಂಜಲೀಸ್ ನಗರ ಸಾರಿಗೆ (MTA) ಬಸ್ಗೆ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದರು. ಆ ಅಪಘಾತದ ವರದಿಗಾಗಿ ಹೆಲಿಕಾಪ್ಟರ್ ಸ್ಥಳದ ಮೇಲೆ ಹಾರಾಟ ನಡೆಸುತ್ತಿತ್ತು.
ರಕ್ಷಣಾ ಕಾರ್ಯಾಚರಣೆ
ಘಟನಾ ಸ್ಥಳಕ್ಕೆ 50ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಹೆಲಿಕಾಪ್ಟರ್ನ ಅವಶೇಷಗಳನ್ನು ತೆರವುಗೊಳಿಸುವ ಹಾಗೂ ದುರಂತಕ್ಕೆ ಕಾರಣ ಪತ್ತೆಹಚ್ಚಲು ಸಾಕ್ಷ್ಯ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ.