‘ವಿದ್ಯಾರ್ಥಿಗಳನ್ನು ರಾಹುಲ್ ಗಾಂಧಿ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ’; ಪ್ರಧಾನ್ ಆಕ್ಷೇಪ
ನವದೆಹಲಿ: ನೀಟ್ ವಿವಾದ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಗಳ ನಡುವೆಯೇ ತಮ್ಮ ರಾಜೀನಾಮೆಗೆ ಆಗ್ರಹ ಕೇಳಿಬರುತ್ತಿರುವ ಸಂದರ್ಭದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ವಿದ್ಯಾರ್ಥಿಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಂಡು ಕಾಂಗ್ರೆಸ್ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ನಿವಾಸದ ಎದುರು ಕಾಂಗ್ರೆಸ್ ನಡೆಸಿದ ಧರಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಭದ್ರತಾ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ಅವರು ಹೇಳಿದ್ದಾರೆ. ನೀಟ್ ಕುರಿತು ಸಮಗ್ರ ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ, ಕಾಂಗ್ರೆಸ್ ಪ್ರಜಾಪ್ರಭುತ್ವದ ಚರ್ಚೆಗಿಂತ ರಾಜಕೀಯ ಪ್ರದರ್ಶನಕ್ಕೆ ಆದ್ಯತೆ ನೀಡಿದೆ ಎಂದು ಟೀಕಿಸಿದ್ದಾರೆ.
“ರಾಹುಲ್ ಗಾಂಧಿಗೆ ಇದು ವಿದ್ಯಾರ್ಥಿಗಳ ಸಮಸ್ಯೆಯ ವಿಷಯವಲ್ಲ; ಚರ್ಚೆಗೆ ಅವಕಾಶವಿದ್ದರೂ ರಾಜಕೀಯ ಸಂಘರ್ಷ ಸೃಷ್ಟಿಸುವುದೇ ಉದ್ದೇಶವಾಗಿದೆ” ಎಂದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
ನೀಟ್ ಸೇರಿದಂತೆ ಯುವಕರ ಎಲ್ಲ ನೈಜ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಕೇಂದ್ರ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ವಿದ್ಯಾರ್ಥಿಗಳಿಗೆ ಘೋಷಣೆಗಳಿಗಿಂತ ಪರಿಹಾರ, ಗೊಂದಲಕ್ಕಿಂತ ನಿಶ್ಚಿತತೆ ಹಾಗೂ ರಾಜಕೀಯಕ್ಕಿಂತ ಹೊಣೆಗಾರಿಕೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.