ಬೆಂಗಳೂರು–ಜ್ಯೂರಿಕ್ ನೇರ ವಿಮಾನಯಾನದಿಂದ ಕರ್ನಾಟಕದ ಜಾಗತಿಕ ಸಂಪರ್ಕಕ್ಕೆ ಹೊಸ ಬಲ: ಎಂ.ಬಿ. ಪಾಟೀಲ್
ಬೆಂಗಳೂರು: ಬೆಂಗಳೂರು ಮತ್ತು ಸ್ವಿಟ್ಜರ್ಲೆಂಡ್ನ ಜ್ಯೂರಿಕ್ ನಡುವೆ ಸ್ವಿಸ್ ಇಂಟರ್ನ್ಯಾಷನಲ್ ಏರ್ ಲೈನ್ಸ್ನ ನೇರ ವಿಮಾನಯಾನ ಆರಂಭವಾಗಿರುವುದು ಕರ್ನಾಟಕದ ಜಾಗತಿಕ ಸಂಪರ್ಕಕ್ಕೆ ಹೊಸ ಅಧ್ಯಾಯ ತೆರೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ನೇರ ವಿಮಾನಯಾನ ಸೇವೆಯ ಆರಂಭದ ಹಿನ್ನೆಲೆಯಲ್ಲಿ ಭಾರತ ಮತ್ತು ಭೂತಾನ್ಗೆ ಸ್ವಿಟ್ಜರ್ಲೆಂಡ್ನ ರಾಯಭಾರಿಯಾಗಿರುವ ಮಾಯಾ ಟಿಸ್ಸಾಫಿ ಅವರೊಂದಿಗೆ ಔತಣಕೂಟದ ಸಭೆಯಲ್ಲಿ ಭಾಗವಹಿಸಿದ್ದಾಗಿ ಸಚಿವರು ತಿಳಿಸಿದ್ದಾರೆ.
ಈ ನೇರ ಸಂಪರ್ಕವು ಕರ್ನಾಟಕ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ವ್ಯಾಪಾರ, ಹೂಡಿಕೆ, ಪ್ರವಾಸೋದ್ಯಮ ಹಾಗೂ ತಂತ್ರಜ್ಞಾನ ಸಹಕಾರವನ್ನು ವಿಸ್ತರಿಸಲು ಹೊಸ ಅವಕಾಶಗಳನ್ನು ಕಲ್ಪಿಸಲಿದೆ. ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವನ್ನು ತಲುಪಲು ಅನುಕೂಲವಾಗುವುದರ ಜತೆಗೆ, ಉಭಯ ದೇಶಗಳ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳೂ ಮತ್ತಷ್ಟು ಬಲಗೊಳ್ಳಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತದಲ್ಲಿ 50ಕ್ಕೂ ಹೆಚ್ಚು ಸ್ವಿಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವುದನ್ನು ಉಲ್ಲೇಖಿಸಿದ ಎಂ.ಬಿ. ಪಾಟೀಲ್, ಹೈ-ಪ್ರಿಸಿಷನ್ ಮೆಷಿನ್ ಟೂಲ್ಸ್, ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿರುವ ಹೂಡಿಕೆ ಅವಕಾಶಗಳ ಕುರಿತು ರಾಯಭಾರಿಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕ್ವಿನ್ ಸಿಟಿ ಯೋಜನೆಯ ಬಗ್ಗೆಯೂ ವಿವರ ಹಂಚಿಕೊಳ್ಳಲಾಗಿದೆ. 2027ರಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (GIM 2027) ಭಾಗವಹಿಸುವಂತೆ ಸ್ವಿಸ್ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕೈಗಾರಿಕಾ ಇಲಾಖೆ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು–ಜ್ಯೂರಿಕ್ ನೇರ ವಿಮಾನಯಾನವು ಜಾಗತಿಕ ಸಂಪರ್ಕವನ್ನು ಹೆಚ್ಚಿಸುವುದರ ಜತೆಗೆ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲಿದೆ. ಅಂತರರಾಷ್ಟ್ರೀಯ ಸಹಭಾಗಿತ್ವಗಳ ಮೂಲಕ ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವನ್ನಾಗಿ ರೂಪಿಸುವ ಪ್ರಯತ್ನಗಳಿಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಎಂ.ಬಿ. ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.