Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಮಿಮ್ಸ್ ಒತ್ತುವರಿ ತೆರವಿಗೆ ಸಚಿವ ಚಲುವರಾಯಸ್ವಾಮಿ ಗಡುವು

By ANU News
September 15, 2026 2 Min Read
0

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಜಾಗದ ಒತ್ತುವರಿ, ಸ್ಲಂ ಬೋರ್ಡ್ ವಸತಿಗಳಲ್ಲಿನ ಅಕ್ರಮ ಹಾಗೂ ಅನಧಿಕೃತ ವಿದ್ಯುತ್ ಸಂಪರ್ಕದ ಆರೋಪಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ರವೀಂದ್ರ ಹಾಗೂ ನಾಗಣ್ಣಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಸಚಿವರ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆಯಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಚಿವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.

ಮಿಮ್ಸ್‌ಗೆ ಸೇರಿದ ಜಾಗದ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ತಾತ್ಕಾಲಿಕ ತಡೆಯಾಜ್ಞೆ ತೆರವುಗೊಳಿಸಲು ಅಡ್ವೊಕೇಟ್ ಜನರಲ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಸ್ಲಂ ಬೋರ್ಡ್, ನಗರಸಭೆ, ಕಾನೂನು ಇಲಾಖೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಶೀಘ್ರ ಉನ್ನತ ಮಟ್ಟದ ಸಭೆ ನಡೆಸಿ, ನವೆಂಬರ್ ಅಥವಾ ಡಿಸೆಂಬರ್ ಅಂತ್ಯದೊಳಗೆ ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿ ಸಮಸ್ಯೆಗೆ ಕಾನೂನುಬದ್ಧ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಅನಧಿಕೃತ ವಿದ್ಯುತ್ ಸಂಪರ್ಕದಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಕ್ರಮ ಸಂಪರ್ಕ ಹೊಂದಿರುವವರಿಗೆ ತಕ್ಷಣ ನೋಟಿಸ್ ನೀಡಿ ಸಂಪರ್ಕ ಕಡಿತಗೊಳಿಸುವುದರ ಜೊತೆಗೆ ಸರ್ಕಾರಕ್ಕೆ ಉಂಟಾಗಿರುವ ನಷ್ಟದ ಮೊತ್ತವನ್ನು ವಸೂಲಿ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸಿಐಡಿ ತನಿಖೆ ಬಗ್ಗೆ ಚರ್ಚೆ

ಮಿಮ್ಸ್ ಪ್ರಕರಣದಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ವರದಿ ಪಡೆದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.

ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸುವಲ್ಲಿ ಹಿಂದೆ ಆರೋಗ್ಯ ಸಚಿವನಾಗಿದ್ದಾಗ ಪಾತ್ರವಹಿಸಿದ್ದಾಗಿ ತಿಳಿಸಿದ ಸಚಿವರು, ಇದೀಗ ಮಿಮ್ಸ್ ಅನ್ನು 1,000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜಿಲ್ಲೆಯ ಏಳು ಶಾಸಕರು ಹಾಗೂ ಮೂವರು ಎಂಎಲ್‌ಸಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಹಾಗೂ ಅಗತ್ಯ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

“ಕಾಲಹರಣ ಮಾಡಲು ಸಭೆ ನಡೆಸಿಲ್ಲ. ನನ್ನ ಮೇಲೆ ಭರವಸೆಯಿಟ್ಟು ಒಂದು ಅವಕಾಶ ಕೊಡಿ” ಎಂದು ಸಚಿವರು ಮನವಿ ಮಾಡಿದರು. ಎಲ್ಲ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ಒಂದು ವಾರದ ಕಾಲಾವಕಾಶ ಕೋರಿದ ಅವರು, ಶೀಘ್ರದಲ್ಲೇ ಸ್ಪಷ್ಟ ಗಡುವು ಪ್ರಕಟಿಸುವುದಾಗಿ ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಹೋರಾಟ ನಡೆಸುವುದು ಪ್ರತಿಯೊಬ್ಬರ ಹಕ್ಕು. ಆದರೆ ಜನರು ಪ್ರತಿಭಟನೆಗೆ ಇಳಿಯುವ ಪರಿಸ್ಥಿತಿ ಬರದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದು ಸಚಿವರು ಹೇಳಿದರು. ಮುಂದಿನ ದಿನಗಳಲ್ಲಿ ಮೈಶುಗರ್ ಕಾರ್ಖಾನೆ, ಅಚ್ಚುಕಟ್ಟು ಪ್ರದೇಶ ಹಾಗೂ ಕೆಆರ್‌ಎಸ್ ವ್ಯಾಪ್ತಿಯ ಸಮಸ್ಯೆಗಳ ಕುರಿತು ಜಿಲ್ಲೆಯ ಸಂಘಟನೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.

ಸಭೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಎಂಎಲ್‌ಸಿ ದಿನೇಶ್ ಗೂಳಿಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Ram Temple Trust rejects reports, says CEO selection was transparent

Next

ಈ ಬಾರಿ ಅದ್ದೂರಿ ಶ್ರೀರಂಗಪಟ್ಟಣ ದಸರಾ ಬದಲು ಸಾಂಪ್ರದಾಯಿಕ ಆಚರಣೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಜಲಜೀವನ್ ಮಿಷನ್ ಗೋಲ್ ಮಾಲ್: ಕಳಪೆ ಕಾಮಗಾರಿ, ನೀರು ಪೂರೈಕೆ ಲೋಪಗಳ ಬಗ್ಗೆ ಸಿಬಿಐ ತನಿಖೆಗೆ ಡಾ.ರವಿ ಸಿ.ಟಿ. ಅಗ್ರಹ
    • Probe sought into alleged lapses, poor quality in Jal Jeevan Mission works
    • Kannada school reopens in Qatar with renewed focus on language, culture
    • ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕತಾರ್‌ನಲ್ಲಿ ಕನ್ನಡ ಪಾಠಶಾಲೆ ಪುನರಾರಂಭ
    • Mekedatu project is only permanent solution to Cauvery dispute, says K’taka minister
    Copyright 2026 — ANU News. All rights reserved. Blogsy WordPress Theme