Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

620 ಕಡೆ ಪ್ರಜಾಸೇವೆ ಅಭಿಯಾನ; ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮನೆಬಾಗಿಲಿಗೆ ಸರ್ಕಾರ: ಮುಖ್ಯಮಂತ್ರಿ

By ANU News
October 4, 2026 2 Min Read
0

ಮೈಸೂರು: ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿರುವ ‘ಪ್ರಜಾಸೇವೆ’ ಅಭಿಯಾನವನ್ನು ಈಗಾಗಲೇ 620 ಕಡೆಗಳಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಒಂದು ಲಕ್ಷಕ್ಕೂ ಅಧಿಕ ಮಂದಿ ಅಹವಾಲು ಸಲ್ಲಿಸಿದ್ದು, ಅರ್ಜಿಗಳ ವಿಲೇವಾರಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪಿರಿಯಾಪಟ್ಟಣದಲ್ಲಿ ಪ್ರಜಾಸೇವೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಅವರಿಗೆ ನ್ಯಾಯ ಒದಗಿಸಲು ತಮ್ಮ 40 ವರ್ಷಗಳ ರಾಜಕೀಯ ಅನುಭವದ ಆಧಾರದಲ್ಲಿ ಈ ಹೊಸ ಇಲಾಖೆಯನ್ನು ಆರಂಭಿಸಲಾಗಿದೆ ಎಂದರು.

ಶಾಸಕರಾದ ಬಳಿಕ ಪ್ರತಿ ವರ್ಷ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ಜನರ ಆಶಯಗಳಿಗೆ ಧ್ವನಿಯಾಗಿ, ಅವರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳನ್ನೊಳಗೊಂಡ ಸರ್ಕಾರವೇ ಜನರ ಮನೆಬಾಗಿಲಿಗೆ ತೆರಳುವ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

620 ಕಡೆಗಳಲ್ಲಿ ಅಭಿಯಾನ; ಲಕ್ಷಕ್ಕೂ ಹೆಚ್ಚು ಅರ್ಜಿ

ಸೆಪ್ಟೆಂಬರ್ 5ರಂದು ಪ್ರಜಾಸೇವೆ ಇಲಾಖೆ ಆರಂಭವಾಗಿದ್ದು, ಈವರೆಗೆ 620 ಕಡೆಗಳಲ್ಲಿ ಅಭಿಯಾನ ಆಯೋಜಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ ಎಂದು ತಿಳಿಸಿದರು.

ರಸ್ತೆ, ಪೋಡಿ, ಪಿಂಚಣಿ, ಕುಡಿಯುವ ನೀರು, ವಿದ್ಯುತ್, ಅರಣ್ಯ, ಆರೋಗ್ಯ, ಪೊಲೀಸ್, ಕಾರ್ಮಿಕ, ಕೃಷಿ ಮತ್ತು ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಆಲಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಬಗೆಹರಿಸುವುದೇ ಸರ್ಕಾರದ ಮುಖ್ಯ ಗುರಿಯಾಗಿದ್ದು, ಜನರು ನೆಮ್ಮದಿಯಿಂದಿದ್ದರೆ ಸರ್ಕಾರಕ್ಕೂ ಆತ್ಮತೃಪ್ತಿ ದೊರೆಯಲಿದೆ ಎಂದರು.

ಉಚಿತ ಕಾನೂನು ನೆರವಿಗೆ ಪ್ರತ್ಯೇಕ ಕೇಂದ್ರ

ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ಕಾನೂನು ನೆರವು ಒದಗಿಸಲು ಪ್ರಜಾಸೇವೆ ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಕಾನೂನು ನೆರವು ನೀಡುವ ವ್ಯವಸ್ಥೆಯಿದ್ದು, ಸಂಬಂಧಪಟ್ಟವರನ್ನು ಅಭಿಯಾನಕ್ಕೆ ಆಹ್ವಾನಿಸಿ ಜನರಿಗೆ ಸ್ಥಳದಲ್ಲೇ ಮಾರ್ಗದರ್ಶನ ನೀಡಲಾಗುತ್ತಿದೆ. ಕಾನೂನು ಪ್ರಕ್ರಿಯೆಗಳಲ್ಲಿ ತೊಡಕು ಎದುರಿಸುತ್ತಿರುವವರಿಗೆ ಉಚಿತವಾಗಿ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಜನರು ಸಲ್ಲಿಸುವ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ವಿಲೇವಾರಿ ಮಾಡಲಿದ್ದಾರೆ. ಯಾವ ಅರ್ಜಿ ವಿಲೇವಾರಿಯಾಗಿದೆ, ಯಾವುದು ಬಾಕಿ ಉಳಿದಿದೆ ಎಂಬುದನ್ನು ತಾವು ಖುದ್ದಾಗಿ ಪರಿಶೀಲಿಸುವುದಾಗಿ ತಿಳಿಸಿದ ಮುಖ್ಯಮಂತ್ರಿ, ಅರ್ಜಿ ಇತ್ಯರ್ಥವಾಗದಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ವಿವರಿಸಿ, ಪರಿಹಾರದ ಮಾರ್ಗವನ್ನೂ ಸೂಚಿಸಲಾಗುವುದು ಎಂದರು.

ಆದಾಯ ಮಿತಿ ಹೆಚ್ಚಳದಿಂದ 12 ಲಕ್ಷ ಮಂದಿಗೆ ಪ್ರಯೋಜನ

ಪಿಂಚಣಿ ಸಂಬಂಧಿತ ಅರ್ಜಿಗಳು ಆರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾಗುತ್ತಿದ್ದವು. ವಾರ್ಷಿಕ ಆದಾಯ ಮಿತಿಯನ್ನು ₹32,000 ಎಂದು ನಿಗದಿಪಡಿಸಿದ್ದರಿಂದ ಹಲವರಿಗೆ ಪಿಂಚಣಿ ಸ್ಥಗಿತಗೊಂಡಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಸುಮಾರು 12 ಲಕ್ಷ ಜನರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಬರುತ್ತಿವೆ. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಬಾರದು. ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ 1ರೊಳಗೆ ಸರ್ಕಾರದ ವಶಕ್ಕೆ ಒಪ್ಪಿಸಬೇಕು. ಅಗತ್ಯವಿರುವವರು ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯಬೇಕು ಎಂದು ಸೂಚಿಸಿದರು.

ಬಗರ್ ಹುಕುಂ ಸೇರಿದಂತೆ ಕಾನೂನುಬದ್ಧವಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸುವುದರ ಜತೆಗೆ, ಯಾರನ್ನೂ ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಜನರ ಅಹವಾಲುಗಳಿಗೆ ಸ್ಪಂದಿಸಿ, ಅರ್ಹ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸುವ ಮೂಲಕ ಪ್ರಜಾಸೇವೆ ಅಭಿಯಾನವನ್ನು ಪರಿಣಾಮಕಾರಿಯಾಗಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

Author

ANU News

Follow Me
Other Articles
Previous

CM Cup-2026: Ramalinga Reddy bats for ‘Health through Sports’

Next

‘Prajaseve’ campaign reaches 620 locations in Karnataka, over one lakh grievances received

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Five Indian sailors rescued after tanker hit by projectile in Strait of Hormuz
    • ಹಾರ್ಮುಜ್ ಜಲಸಂಧಿಯಲ್ಲಿ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ: ಐವರು ಭಾರತೀಯರ ರಕ್ಷಣೆ
    • Netanyahu praises Indian pilot’s bravery, invites him to light Israel’s Independence Day torch
    • ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಧೈರ್ಯಕ್ಕೆ ನೆತನ್ಯಾಹು ಮೆಚ್ಚುಗೆ; ಭಾರತೀಯ ಪೈಲಟ್‌ಗೆ ಇಸ್ರೇಲ್ ಸ್ವಾತಂತ್ರ್ಯ ದಿನದ ಜ್ಯೋತಿ ಬೆಳಗಿಸುವ ಆಹ್ವಾನ
    • ಐದು ಶಾಸ್ತ್ರೀಯ ಭಾಷೆಗಳಿಗೆ ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಅನುಮೋದನೆ
    Copyright 2026 — ANU News. All rights reserved. Blogsy WordPress Theme