Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ

By ANU News
October 17, 2026 2 Min Read
0

ಮಂಡ್ಯ: ದಕ್ಷಿಣ ಭಾರತದ ಹೆಮ್ಮೆಯ ಕಾವೇರಿ ನದಿಗೆ ಗಂಗಾರತಿ ಮಾದರಿಯಲ್ಲಿ ದೀಪಾರತಿ ಸಲ್ಲಿಸುವ ಎರಡನೇ ವರ್ಷದ ‘ಕಾವೇರಿ ಆರತಿ’ ಮಹೋತ್ಸವಕ್ಕೆ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟಿನ ಬೃಂದಾವನ ಉದ್ಯಾನವನದಲ್ಲಿ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಕಾವೇರಿ ಒಡಲಿನ ಐತಿಹಾಸಿಕ ಬೃಂದಾವನದ ದೋಣಿ ವಿಹಾರ ಕೇಂದ್ರದ ಬಳಿ ನಡೆದ ಈ ಕಾರ್ಯಕ್ರಮ ಭಕ್ತಿ ಮತ್ತು ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

ವೇದಿಕೆ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಗಣ್ಯರ ಭಾಷಣಕ್ಕೂ ಮುನ್ನವೇ ರಾತ್ರಿ 7.47ಕ್ಕೆ ಕಾವೇರಿ ಆರತಿಯ ಪೂಜಾ ವಿಧಿವಿಧಾನಗಳು ಆರಂಭವಾದವು. ಧಾರ್ಮಿಕ ದತ್ತಿ ಇಲಾಖೆಯ ವೈದಿಕರು ಸುಮಾರು 30 ನಿಮಿಷಗಳ ಕಾಲ ಕಾವೇರಿ ಮಾತೆಗೆ ಆರತಿ ಸಲ್ಲಿಸಿದರು. ಬಳಿಕ ವಾರಾಣಸಿಯಿಂದ ಆಗಮಿಸಿದ್ದ ತಂಡ ಆರತಿ ನೆರವೇರಿಸಿತು. ವಿವಿಧ ತಂಡಗಳು ಸೇರಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಆರತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭಕ್ತಿಭಾವದಿಂದ ವೀಕ್ಷಿಸಿದರು.

ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾ ಹಾಗೂ ಕಾವೇರಿ ಆರತಿ ಮಹೋತ್ಸವದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಬೃಂದಾವನ ಉದ್ಯಾನವನವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕಣ್ಣು ಕೋರೈಸುವ ಲೇಸರ್ ಬೆಳಕು ಮತ್ತು ಹೈಬೀಮ್ ದೀಪಗಳು ಪ್ರವಾಸಿಗರ ಗಮನ ಸೆಳೆದವು.

ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಜಲಮಂಡಳಿ ಹಾಗೂ ಮಂಡ್ಯ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದವು. ಆರತಿ ವೀಕ್ಷಿಸಲು ಆಗಮಿಸಿದ ಜನರಿಗೆ ಉಚಿತ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಂದಿನ ಆರು ದಿನಗಳೂ ಪ್ರಸಾದ ವಿನಿಯೋಗ ನಡೆಯಲಿದೆ.

ದಸರಾ ಅವಧಿಯಲ್ಲಿ ಪ್ರತಿದಿನ 8,000ದಿಂದ 10,000ಕ್ಕೂ ಅಧಿಕ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಜತೆಗೆ ತಮಿಳುನಾಡು ಮತ್ತು ಕೇರಳದಿಂದ ಬರುವ ಪ್ರವಾಸಿಗರೂ ಕಾವೇರಿ ಆರತಿಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾತಂಡಗಳು ಬೃಂದಾವನದ ಸಾಂಸ್ಕೃತಿಕ ಮೆರುಗನ್ನು ಹೆಚ್ಚಿಸಿದವು. ನಾದಸ್ವರ, ಚೆಂಡೆ, ಪೂಜಾ ಕುಣಿತ, ಬೊಂಬೆಮೇಳ, ಮಹಿಳಾ ವೀರಗಾಸೆ, ಕೊಂಬು-ಕಹಳೆ, ಡೊಳ್ಳು ಕುಣಿತ, ನಂದಿಧ್ವಜ ಕುಣಿತ, ಜಗ್ಗಲಿಗೆ ಮೇಳ, ಕೀಲುಕುದುರೆ, ಕಂಗೀಲು ನೃತ್ಯ, ತಮಟೆ ವಾದನ, ಕಂಸಾಳೆ ಹಾಗೂ ಗೊರವರ ಕುಣಿತ ಸೇರಿದಂತೆ ಹಲವು ಜಾನಪದ ಪ್ರದರ್ಶನಗಳು ಗಮನ ಸೆಳೆದವು.

ಗಣೇಶ, ಚಾಮುಂಡೇಶ್ವರಿ ಹಾಗೂ ತುಳುನಾಡಿನ ದೈವಾರಾಧನೆಗೆ ಸಂಬಂಧಿಸಿದ ಪ್ರದರ್ಶನಗಳು ನೆರೆದಿದ್ದವರಲ್ಲಿ ಭಕ್ತಿಭಾವ ಮೂಡಿಸಿದವು.

ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಜಿಲ್ಲಾಡಳಿತದ ವತಿಯಿಂದ 2026ರ ನಾಡಹಬ್ಬದ ಅಂಗವಾಗಿ ಆಯೋಜಿಸಿರುವ ಕಾವೇರಿ ಆರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಟೋಬರ್ 21ರವರೆಗೆ ಪ್ರತಿದಿನ ಸಂಜೆ 6ರಿಂದ ಬೃಂದಾವನ ಉದ್ಯಾನವನದಲ್ಲಿ ನಡೆಯಲಿವೆ.

ಕಾರ್ಯಕ್ರಮದಲ್ಲಿ ಸಚಿವರಾದ ಪಿ.ಎಂ. ನರೇಂದ್ರಸ್ವಾಮಿ ಮತ್ತು ಶಿವಲಿಂಗೇಗೌಡ, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ ಮತ್ತು ಕೆ.ಎಂ. ಉದಯ್, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಶಿವಣ್ಣ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಸೋಮೇಶ್ವರ ಸ್ವಾಮೀಜಿ, ಕೆಂಗೇರಿ ಒಕ್ಕಲಿಗರ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಕಾಗಿನೆಲೆ ಕನಕ ಗುರುಪೀಠದ ಮೈಸೂರು ವಿಭಾಗದ ಜಗದ್ಗುರು ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

Author

ANU News

Follow Me
Other Articles
Previous

B.K. Hariprasad Calls for Coordinated Congress Campaign in Hiriyur By-election

Next

ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’: ನಾಡಿನ ಸಮೃದ್ಧಿ, ರೈತರ ಸುಖ-ಸಂತೋಷಕ್ಕಾಗಿ ಪ್ರಾರ್ಥನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇರಾನ್ ವಿರುದ್ಧ ‘ಮದರ್ ಆಫ್ ಆಲ್ ಬಾಂಬ್ಸ್’: ಅಮೆರಿಕ ರಣತಂತ್ರ
    • ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’: ನಾಡಿನ ಸಮೃದ್ಧಿ, ರೈತರ ಸುಖ-ಸಂತೋಷಕ್ಕಾಗಿ ಪ್ರಾರ್ಥನೆ
    • ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ
    • B.K. Hariprasad Calls for Coordinated Congress Campaign in Hiriyur By-election
    • KRS Hosts Grand ‘Kaveri Aarti’, Blending Devotion, Culture and Light
    Copyright 2026 — ANU News. All rights reserved. Blogsy WordPress Theme