ಏಳು ಷರತ್ತುಗಳಿಗೆ ಅಮೆರಿಕ ಒಪ್ಪಿದರೆ ಮಾತ್ರ ಹಾರ್ಮುಜ್ ಜಲಸಂಧಿ ತೆರೆಯುವ ಸೂಚನೆ; ಅಮೆರಿಕಾಗೆ ಇರಾನ್ ಸಂದೇಶ
ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ರಾಜತಾಂತ್ರಿಕ ಮಾತುಕತೆಗಳ ಪ್ರಯತ್ನ ಮುಂದುವರಿದಿರುವ ನಡುವೆಯೇ ಉಭಯ ರಾಷ್ಟ್ರಗಳ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಅಥವಾ ಇಸ್ರೇಲ್‌ನ ಯಾವುದೇ ಬೆದರಿಕೆಗೆ ತಕ್ಷಣ ಪ್ರತಿಕ್ರಿಯಿಸಲಾಗುವುದು ಎಂದು ಇರಾನ್ ಸೇನಾ ಮುಖ್ಯಸ್ಥ ಅಲಿ ಅಬ್ದೊಲ್ಲಾಹಿ ಎಚ್ಚರಿಸಿದ್ದಾರೆ.
ಇರಾನ್‌ನ ಪ್ರತಿಕ್ರಿಯೆ ಭೌಗೋಳಿಕ ಮಿತಿಗಳನ್ನು ಮೀರಿ ಇರಲಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಇರಾನ್ ಮುಂದಿಟ್ಟಿರುವ ಏಳು ಷರತ್ತುಗಳಿಗೆ ಅಮೆರಿಕ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಭದ್ರತಾ ಮಂಡಳಿ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಆರೋಪಿಸಿದ್ದಾರೆ.

ಈ ಏಳು ಷರತ್ತುಗಳನ್ನು ಅಮೆರಿಕ ಒಪ್ಪಿಕೊಂಡರೆ ಮಾತ್ರ ಹಾರ್ಮುಜ್ ಜಲಸಂಧಿಯನ್ನು ತೆರೆಯಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ.
ಸೆಪ್ಟೆಂಬರ್ 22ರಂದು ಮಧ್ಯವರ್ತಿಗಳ ಮೂಲಕ ಯುದ್ಧ ಅಂತ್ಯಗೊಳಿಸುವ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಸಲ್ಲಿಸಲಾಗಿತ್ತು. ಆರಂಭದಲ್ಲಿ ಏಳು ದಿನಗಳ ಅವಧಿಗೆ ರೂಪಿಸಿದ್ದ ಯೋಜನೆಯನ್ನು ಇದೀಗ ಎರಡು ದಿನಗಳಿಗೆ ಇಳಿಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಯ್ ತಿಳಿಸಿದ್ದಾರೆ.