ಬಿಜೆಪಿ–ಕಾಂಗ್ರೆಸ್ ನಡುವೆ ಒಳ ಒಪ್ಪಂದವಿದೆ: ಕೆಟಿಆರ್ ಆರೋಪ
ಆದಿಲಾಬಾದ್: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜಕೀಯವಾಗಿ ಎದುರಾಳಿಗಳಂತೆ ಕಂಡರೂ, ತೆರೆಮರೆಯಲ್ಲಿ ಕೈಜೋಡಿಸಿ ಕೆಲಸ ಮಾಡುತ್ತಿವೆ ಎಂದು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ (ಕೆಟಿಆರ್) ಆರೋಪಿಸಿದ್ದಾರೆ.
ಆದಿಲಾಬಾದ್‌ನಲ್ಲಿ ಭಾನುವಾರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ಥಳೀಯ ಬಿಜೆಪಿ ಶಾಸಕರು ಮತ್ತು ಸಂಸದರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಬಿಜೆಪಿ ಜನರನ್ನು ವಿಭಜಿಸುತ್ತಿದ್ದರೆ, ಕಾಂಗ್ರೆಸ್ ಸರ್ಕಾರ ಜನರನ್ನು ಶೋಷಿಸುತ್ತಿದೆ ಎಂದು ಟೀಕಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ತೆಲಂಗಾಣದಲ್ಲಿದ್ದ ಶಾಂತಿ, ಸಹೋದರತ್ವ ಮತ್ತು ಸಮೃದ್ಧಿಯ ವಾತಾವರಣ ಈಗ ಬದಲಾಗಿದೆ ಎಂದು ಅವರು ಪ್ರತಿಪಾದಿಸಿದರು. ರಂಜಾನ್ ಮತ್ತು ಬತುಕಮ್ಮ ಹಬ್ಬಗಳ ಸಂದರ್ಭದಲ್ಲಿ ಉಡುಗೊರೆ ಹಂಚುವಂತಹ ಸಂಪ್ರದಾಯಗಳು ಮಾಯವಾಗಿವೆ ಎಂದರು.
ಮತದಾನ ಮಾಡುವ ಮುನ್ನ ಜನರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು. ತಪ್ಪಾದ ಆಯ್ಕೆಯ ಪರಿಣಾಮಗಳನ್ನು ಮುಂದಿನ ಐದು ವರ್ಷಗಳ ಕಾಲ ಅನುಭವಿಸಬೇಕಾಗುತ್ತದೆ ಎಂದು ಕೆಟಿಆರ್ ಮತದಾರರಿಗೆ ಎಚ್ಚರಿಕೆ ನೀಡಿದರು.