ರಾಮಲೀಲಾ ಮೈದಾನದನ ಇಂಡಿಯಾ ಒಕ್ಕೂಟದ ಸಮಾವೇಶ ‘ಫ್ಲಾಪ್ ಶೋ’: ಬಿಜೆಪಿ ಟೀಕೆ
ನವದೆಹಲಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ‘ವೋಟ್ ಬಚಾವೋ–ದೇಶ ಬಚಾವೋ’ ಸಮಾವೇಶಕ್ಕೆ ಭಾರಿ ಜನಸಂದಣಿ ಸೇರಿತ್ತು ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಪ್ರಶ್ನಿಸಿದ್ದಾರೆ. ಸಮಾವೇಶಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ವ್ಯಕ್ತಪಡಿಸಲಾಗಿತ್ತು. ಆದರೆ ವಾಸ್ತವದಲ್ಲಿ ಜನರ ಸಂಖ್ಯೆ ಕಡಿಮೆಯಿತ್ತು ಎಂದು ಅವರು ಟೀಕಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾತ್ರಾ, ಸಮಾವೇಶದ ಸ್ಥಳದ ದೃಶ್ಯಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ಪವನ್ ಖೇರಾ ಅವರ ಹೇಳಿಕೆಗಳನ್ನು ತಳ್ಳಿಹಾಕಿದರು.
ರಾಮಲೀಲಾ ಮೈದಾನ 10ರಿಂದ 12 ಎಕರೆ ವಿಸ್ತೀರ್ಣ ಹೊಂದಿದ್ದು, ಸುಮಾರು ಶೇ.15ರಷ್ಟು ಜಾಗವನ್ನು ವೇದಿಕೆ ಮತ್ತು ಅದರ ಮುಂದಿನ ಡಿ-ವಿಭಾಗ ಆಕ್ರಮಿಸಿತ್ತು. ಮೈದಾನದ ಸುಮಾರು ಶೇ.40ರಷ್ಟು ಭಾಗ ಖಾಲಿಯಿತ್ತು. ಅಲ್ಲಿ ಆಸನ ವ್ಯವಸ್ಥೆಯೂ ಇರಲಿಲ್ಲ, ಜನರೂ ಇರಲಿಲ್ಲ ಎಂದು ಪಾತ್ರಾ ಪ್ರತಿಪಾದಿಸಿದರು.
ಸಮಾವೇಶದಲ್ಲಿ ಪಾಲ್ಗೊಂಡವರ ಸಂಖ್ಯೆಯ ಕುರಿತು ಇಂಡಿಯಾ ಒಕ್ಕೂಟದ ನಾಯಕರು ನೀಡಿದ ಹೇಳಿಕೆಗಳನ್ನು ಪ್ರಶ್ನಿಸಲು ಬಿಜೆಪಿ ಈ ದೃಶ್ಯಗಳನ್ನು ಆಧಾರವಾಗಿ ಬಳಸಿಕೊಂಡಿದೆ.