ಸೇಂಟ್ ಜರ್ಮೇನ್ಸ್ ಅಕಾಡೆಮಿಯಲ್ಲಿ ‘ಚಾಂಪಿಯನ್ಸ್ ಇನ್ ಮೀ’ ಸಮಗ್ರ ಕ್ರೀಡಾಕೂಟ; HIV ಪೀಡಿತ ಮಕ್ಕಳ ಕ್ರೀಡಾ ಪ್ರತಿಭೆಗೆ ಸರ್ಕಾರದ ಬೆಂಬಲ
ಬೆಂಗಳೂರು: HIV/AIDS ಸೋಂಕಿನೊಂದಿಗೆ ಬದುಕುತ್ತಿರುವ ಮಕ್ಕಳ ಕ್ರೀಡಾ ಪ್ರತಿಭೆಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಆರೋಗ್ಯದ ಸ್ಥಿತಿಯನ್ನು ಆಧರಿಸಿ ಯಾವುದೇ ಪ್ರತಿಭೆಗೆ ಅನ್ಯಾಯವಾಗದಂತೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಸ್. ಈ. ಸುಧೀಂದ್ರ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಫ್ರೇಜರ್ ಟೌನ್‌ನ ಸೇಂಟ್ ಜರ್ಮೇನ್ಸ್ ಅಕಾಡೆಮಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಚಾಂಪಿಯನ್ಸ್ ಇನ್ ಮೀ’ ಸಮಗ್ರ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ HIV/AIDS ಸೋಂಕಿನೊಂದಿಗೆ ಬದುಕುತ್ತಿರುವ ಮಕ್ಕಳು ಹಾಗೂ ಇತರ ಶಾಲಾ ವಿದ್ಯಾರ್ಥಿಗಳು ಯಾವುದೇ ಭೇದಭಾವವಿಲ್ಲದೆ ಒಂದೇ ವೇದಿಕೆಯಲ್ಲಿ ಪಾಲ್ಗೊಂಡಿರುವುದು ಕ್ರೀಡಾಸ್ಫೂರ್ತಿ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸಹಕಾರದೊಂದಿಗೆ ಮಕ್ಕಳಿಗೆ ಅಗತ್ಯ ವೈದ್ಯಕೀಯ, ಸಾಂಸ್ಥಿಕ ಹಾಗೂ ಕ್ರೀಡಾ ನೆರವು ನೀಡಲಿದೆ ಎಂದರು.
ಕ್ರೀಡಾಕೂಟಕ್ಕೆ ಅಕಾಡೆಮಿ ಆವರಣ ಒದಗಿಸಿದ ಫಾದರ್ ಆಡ್ರಿಯನ್ ಮಸ್ಕರೇನಸ್ ಅವರಿಗೆ ಧನ್ಯವಾದ ಸಲ್ಲಿಸಿದರು. ಸ್ಥಳೀಯ ಶಾಸಕ ಎ.ಸಿ. ಶ್ರೀನಿವಾಸ ಹಾಗೂ ಸಚಿವ ರಿಜ್ವಾನ್ ಅರ್ಷದ್ ಅವರ ಬೆಂಬಲದ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ (BSSF) ಸಂಸ್ಥಾಪಕ ಟ್ರಸ್ಟಿ ಎಲ್ವಿಸ್ ಜೋಸೆಫ್ ಅವರ ಸೇವೆಯನ್ನು ಶ್ಲಾಘಿಸಿದ ಅವರು, ಮಕ್ಕಳನ್ನು ನೆದರ್‌ಲ್ಯಾಂಡ್ಸ್‌ನ ಅಂತರರಾಷ್ಟ್ರೀಯ ವೇದಿಕೆ ಹಾಗೂ ಜರ್ಮನಿಯ ಸಂಸತ್ತಿಗೆ ಕರೆದೊಯ್ದು ಅವರ ಹಕ್ಕುಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಂಘಟಕರನ್ನು ಅಭಿನಂದಿಸಿ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸುವ ಸಮಾಜ ನಿರ್ಮಾಣಕ್ಕೆ ಕರೆ ನೀಡಿದರು.