ಆನೆ ಸ್ಥಳಾಂತರ ಶಾಶ್ವತ ಪರಿಹಾರವಲ್ಲ; ವೈಜ್ಞಾನಿಕ ಕ್ರಮ ಅಗತ್ಯ: ಡಾ. ರವಿ ಸಿ.ಟಿ
ಚಿಕ್ಕಮಗಳೂರು: ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕಾಡಾನೆಗಳನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸುವುದು ಶಾಶ್ವತ ಪರಿಹಾರವಲ್ಲ. ಆನೆಗಳು ಕಾಡು ಬಿಟ್ಟು ನಾಡಿಗೆ ಬರಲು ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಮೂಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಆಹಾರ ಮತ್ತು ನೀರಿನ ಕೊರತೆ ಹಾಗೂ ಸಾಂಪ್ರದಾಯಿಕ ಆನೆ ಕಾರಿಡಾರ್‌ಗಳ ನಾಶದಿಂದ ಆನೆಗಳು ನಾಡಿನತ್ತ ಬರುತ್ತಿವೆ. ಆನೆಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಿರುವ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದರು.

ಅರಣ್ಯದಲ್ಲಿ ಅಕೇಶಿಯಾ, ನೀಲಗಿರಿ ಮತ್ತು ಸಾಗುವಾನಿಯಂತಹ ಮರಗಳನ್ನು ಬೆಳೆಸುವಾಗ ವನ್ಯಜೀವಿಗಳಿಗೆ ಆಹಾರ ಮತ್ತು ಮೇವು ದೊರೆಯುತ್ತದೆಯೇ ಎಂಬುದನ್ನು ಪರಿಗಣಿಸಿಲ್ಲ. ಲಾಭದ ದೃಷ್ಟಿಯಿಂದ ಅರಣ್ಯ ನಿರ್ವಹಣೆ ಮಾಡಿದ ಪರಿಣಾಮ ಮನುಷ್ಯರು ಮತ್ತು ವನ್ಯಜೀವಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.
ಆನೆಗಳನ್ನು ಹಾಸನದಿಂದ ಚಿಕ್ಕಮಗಳೂರಿಗೆ ಅಥವಾ ಬೇರೆಡೆಗೆ ಸ್ಥಳಾಂತರಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವುಗಳನ್ನು ಒಂದು ಪ್ರದೇಶದಲ್ಲಿ ಕಟ್ಟಿ ಹಾಕಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಇಂತಹ ನಿರ್ಧಾರಗಳು ಜನರಿಗೆ ತಪ್ಪು ಭರವಸೆ ನೀಡಿದಂತಾಗುತ್ತದೆ. ಪ್ರಾಣಿ-ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಅರಿತು, ವೈಜ್ಞಾನಿಕ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ರೂಪಿಸಬೇಕು ಎಂದು ಡಾ. ರವಿ ಸಿ.ಟಿ ಆಗ್ರಹಿಸಿದರು.