ಸಿಎಂ ಚಿಕ್ಕಮಗಳೂರು ಭೇಟಿ ಸಂದರ್ಭದಲ್ಲಿ ಸಿ.ಟಿ.ರವಿ ಬಹಿರಂಗ ಪತ್ರ
ಮಲೆನಾಡು ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಕಸ್ತೂರಿ ರಂಗನ್ ಕರಡು ಅಧಿಸೂಚನೆ ಮರುಪರಿಶೀಲನೆಗೆ ಸಿ.ಟಿ. ರವಿ ಆಗ್ರಹ..
ಚಿಕ್ಕಮಗಳೂರು: ಸೆ.19ರಂದು ಚಿಕ್ಕಮಗಳೂರು ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದು, ಜಿಲ್ಲೆಯ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಶಿವಕುಮಾರ್ ಅವರಿಗೆ ಸ್ವಾಗತ ಕೋರಿರುವ ಸಿ.ಟಿ. ರವಿ, ರಸ್ತೆ, ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ, ಕುಡಿಯುವ ನೀರು ಹಾಗೂ ಜಲಜೀವನ್ ಮಿಷನ್ ಕಾಮಗಾರಿಗಳ ಕುರಿತು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಮಲೆನಾಡು-ಕರಾವಳಿ ರಸ್ತೆ ಅಭಿವೃದ್ಧಿಗೆ ಪ್ಯಾಕೇಜ್
ತೀರ್ಥಹಳ್ಳಿ-ಬಾಳೆಹೊನ್ನೂರು-ಚಿಕ್ಕಮಗಳೂರು ಮಾರ್ಗ ಸೇರಿದಂತೆ ಮಲೆನಾಡು ಭಾಗದ ರಸ್ತೆಗಳ ದುಸ್ಥಿತಿಯನ್ನು ಮುಖ್ಯಮಂತ್ರಿ ಖುದ್ದಾಗಿ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ರಸ್ತೆಗಳಲ್ಲಿ ಗುಂಡಿಗಳಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಉಲ್ಲೇಖಿಸಿರುವ ಅವರು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿದ್ದಾರೆ.

ಇಎಸ್ಎ ವ್ಯಾಪ್ತಿ ಮರುಪರಿಶೀಲನೆಗೆ ಮನವಿ
ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಕರಡು ಅಧಿಸೂಚನೆಯ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟ ಪ್ರದೇಶದ ಜನರಲ್ಲಿ ಉಂಟಾಗಿರುವ ಆತಂಕವನ್ನು ನಿವಾರಿಸಲು ರಾಜ್ಯ ಸರ್ಕಾರ ಕೇಂದ್ರದ ಗಮನಕ್ಕೆ ಸಮಗ್ರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕೃಷಿ, ತೋಟಗಾರಿಕೆ, ಜನವಸತಿ, ರಸ್ತೆ ಹಾಗೂ ಜನರ ಜೀವನೋಪಾಯಕ್ಕೆ ಅಗತ್ಯವಿರುವ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶದಿಂದ ಪ್ರತ್ಯೇಕವಾಗಿ ಗುರುತಿಸಬೇಕು. ಗ್ರಾಮ ಮಟ್ಟದಲ್ಲಿ ನಿಖರ ಭೂನಕ್ಷೆ ಸಿದ್ಧಪಡಿಸಿ ಸ್ಥಳೀಯ ಜನಪ್ರತಿನಿಧಿಗಳು, ರೈತರು, ಅರಣ್ಯದಂಚಿನ ನಿವಾಸಿಗಳು, ಪರಿಸರ ತಜ್ಞರು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಪಶ್ಚಿಮಘಟ್ಟದ ಅರಣ್ಯ, ಜೀವ ವೈವಿಧ್ಯ ಹಾಗೂ ಜಲಮೂಲಗಳ ಸಂರಕ್ಷಣೆಯೊಂದಿಗೆ ಅಲ್ಲಿನ ರೈತರು ಮತ್ತು ಗ್ರಾಮೀಣ ಜನರ ಜೀವನೋಪಾಯಕ್ಕೂ ರಕ್ಷಣೆ ದೊರೆಯಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ಕುಡಿಯುವ ನೀರಿಗೆ ವಿಶೇಷ ಆದ್ಯತೆ
ಕೊಪ್ಪ, ನರಸಿಂಹರಾಜಪುರ ಹಾಗೂ ಅಜ್ಜಂಪುರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ ಕೆಲವು ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಅನುದಾನದ ಕೊರತೆಯ ಕಾರಣ ನೀಡಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಉತ್ತರ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಟಾಸ್ಕ್ಫೋರ್ಸ್ ರಚಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಲಜೀವನ್ ಮಿಷನ್ ಕಾಮಗಾರಿ ತನಿಖೆಗೆ ಆಗ್ರಹ
ಜಲಜೀವನ್ ಮಿಷನ್ ಕಾಮಗಾರಿಗಳಲ್ಲಿ ಪೈಪ್ಲೈನ್, ಓವರ್ಹೆಡ್ ಟ್ಯಾಂಕ್, ರಸ್ತೆ ಪುನರ್ಸ್ಥಾಪನೆ ಹಾಗೂ ನೀರು ಪೂರೈಕೆಗೆ ಸಂಬಂಧಿಸಿದಂತೆ ಹಲವು ಲೋಪದೋಷಗಳಿವೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.
ಕೆಲವು ಗ್ರಾಮಗಳಲ್ಲಿ ಕಾಮಗಾರಿ ಅಪೂರ್ಣವಾಗಿದ್ದು, ಕೆಲವೆಡೆ ಟ್ಯಾಂಕ್ಗಳಿಗೆ ನೀರು ತುಂಬಿಸಲಾಗುತ್ತಿಲ್ಲ. ಎತ್ತರದ ಪ್ರದೇಶಗಳಿಗೆ ನೀರು ತಲುಪದಿರುವುದು, ಹೊಸದಾಗಿ ನಿರ್ಮಿಸಿರುವ ಟ್ಯಾಂಕ್ಗಳು ಸೋರಿಕೆಯಾಗುತ್ತಿರುವುದು ಹಾಗೂ ಕಾಮಗಾರಿ ಪೂರ್ಣಗೊಂಡಿದ್ದರೂ ಮನೆಗಳಿಗೆ ನೀರು ತಲುಪದಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ ಹಲವು ಗ್ರಾಮಗಳ ಕಾಮಗಾರಿಗಳನ್ನು ನೀಡಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿರುವ ಅವರು, ಲೋಪದೋಷಗಳ ಕುರಿತು ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮನೆಗಳಿಗೆ ನಲ್ಲೆ ಸಂಪರ್ಕ ಕಲ್ಪಿಸುವುದಷ್ಟೇ ಯೋಜನೆಯ ಪೂರ್ಣತೆ ಎಂದು ಪರಿಗಣಿಸದೆ, ಪ್ರತಿಯೊಂದು ಮನೆಯ ನಲ್ಲಿಯಲ್ಲೂ ಸುರಕ್ಷಿತ ಹಾಗೂ ನಿರಂತರ ನೀರು ಪೂರೈಕೆಯಾಗುವುದನ್ನು ಖಚಿತಪಡಿಸಿಕೊಂಡ ನಂತರವೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
‘ಅರಣ್ಯವೂ ಉಳಿಯಬೇಕು–ಪರಿಸರವೂ ಉಳಿಯಬೇಕು–ಅರಣ್ಯದೊಂದಿಗೆ ಬದುಕುತ್ತಿರುವ ಜನರ ಬದುಕೂ ಉಳಿಯಬೇಕು’ ಎಂಬ ಆಶಯದೊಂದಿಗೆ ಪಶ್ಚಿಮಘಟ್ಟ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸಮತೋಲಿತ ಪರಿಹಾರ ಕಂಡುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಸಿ.ಟಿ. ರವಿ ಮನವಿ ಮಾಡಿದ್ದಾರೆ.