ಎಲ್ ನಿನೊ ಜಾಗತಿಕ ಆರ್ಥಿಕತೆಗೆ ಹೊಡೆತ: ವಿಶ್ವಸಂಸ್ಥೆ ಎಚ್ಚರಿಕೆ
ವಿಶ್ವಸಂಸ್ಥೆ: ಎಲ್ ನಿನೊ ವಿದ್ಯಮಾನವು ಜಾಗತಿಕ ಆರ್ಥಿಕತೆಗೆ ತೀವ್ರ ಹೊಡೆತ ನೀಡುವ ಸಾಧ್ಯತೆಯಿದ್ದು, ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಪೆಸಿಫಿಕ್ ಪ್ರದೇಶಗಳಲ್ಲಿ ಬರ, ಪ್ರವಾಹ ಹಾಗೂ ತೀವ್ರ ಉಷ್ಣತೆಯ ಅಪಾಯ ಎದುರಾಗಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಎಲ್ ನಿನೊ ಈ ವರ್ಷದ ಕೊನೆಯಲ್ಲಿ ಗರಿಷ್ಠ ಮಟ್ಟ ತಲುಪುವ ನಿರೀಕ್ಷೆಯಿದ್ದು, ಅದರ ಪರಿಣಾಮ ವರ್ಷಾಂತ್ಯದ ನಂತರವೂ ಮುಂದುವರಿಯಬಹುದು ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಮುಖ್ಯಸ್ಥೆ ಸೆಲೆಸ್ಟೆ ಸೌಲೊ ತಿಳಿಸಿದ್ದಾರೆ. ಆಗ್ನೇಯ ಏಷ್ಯಾದಲ್ಲಿ ಮಳೆಯ ಕೊರತೆ ಮತ್ತು ತಾಪಮಾನ ಏರಿಕೆಯಿಂದ ಕೃಷಿ, ಜಲಮೂಲಗಳು ಹಾಗೂ ಆಹಾರ ಭದ್ರತೆಯ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಕಾಡ್ಗಿಚ್ಚು ಮತ್ತು ಹೊಗೆ ಸಂಬಂಧಿತ ಅಪಾಯಗಳ ಬಗ್ಗೆಯೂ ಆತಂಕ ವ್ಯಕ್ತವಾಗಿದೆ.

ಸಂಭಾವ್ಯ ಹಾನಿ ತಡೆಯಲು ಮುಂದಿನ ಎರಡು ವಾರಗಳು ನಿರ್ಣಾಯಕ ಎಂದು ವಿಶ್ವಸಂಸ್ಥೆಯ ಟಾಮ್ ಫ್ಲೆಚರ್ ಹೇಳಿದ್ದಾರೆ. ಸರ್ಕಾರಗಳು, ನಾಗರಿಕ ಸಂಘಟನೆಗಳು ಮತ್ತು ಉದ್ಯಮಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ವಿಪತ್ತು ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.