ತುಳುನಾಡಿನ ಜನಪದ ಕಥೆ ಆಧಾರಿತ 5 ಇಂಗ್ಲಿಷ್ ಕೃತಿಗಳ ಲೋಕಾರ್ಪಣೆ; ತುಳು ಭಾಷಾ ಸಾಹಿತ್ಯ ಜಗತ್ತಿಗೆ ತಲುಪಲಿ ಎಂದ ಗಣೇಶ್ ರಾವ್
ಮಂಗಳೂರು: ಪ್ರಾದೇಶಿಕ ಭಾಷೆಗಳ ಸಾಹಿತ್ಯ ಜಾಗತಿಕ ಭಾಷೆಗಳಿಗೆ ಅನುವಾದಗೊಂಡಾಗ ದೇಶೀಯ ಸಾಂಸ್ಕೃತಿಕ ಮೌಲ್ಯಗಳು ಹಾಗೂ ಭಾಷೆಯ ಸಾಹಿತ್ಯಿಕ ಸಂಪತ್ತು ಜಗತ್ತಿಗೆ ಪರಿಚಯವಾಗುತ್ತದೆ ಎಂದು ಶಿಕ್ಷಣ ತಜ್ಞ, ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗಣೇಶ್ ಎಸ್. ರಾವ್ ಹೇಳಿದ್ದಾರೆ.
ಮಂಗಳೂರಿನ ಪಾದುವ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತುಳುವಿನಿಂದ ಇಂಗ್ಲಿಷ್ಗೆ ಅನುವಾದಿಸಿರುವ ಮಕ್ಕಳಿಗಾಗಿ ತುಳುನಾಡಿನ ಜನಪದ ಕಥೆಗಳ ಸರಣಿಯ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಮಾತನಾಡಿ, ತುಳುನಾಡಿನ ಕಥೆಗಳನ್ನು ಹೊರ ಜಿಲ್ಲೆ, ರಾಜ್ಯ ಹಾಗೂ ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಮತ್ತು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಇಂಗ್ಲಿಷ್ ಆವೃತ್ತಿಗಳನ್ನು ಪ್ರಕಟಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾದುವ ಕಾಲೇಜಿನ ಪ್ರಾಂಶುಪಾಲ ವಂ. ಅರುಣ್ ವಿಲ್ಸನ್ ಲೋಬೊ ಮಾತನಾಡಿ, ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿ ಬೆಳೆಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದರು.
ಪಾದುವ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸಿನ ಫ್ಲಾರೆನ್ಸ್ ಡಿಸೋಜ, ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಮಮತಾ ಹಾಗೂ ವಿದ್ಯಾರ್ಥಿ ಪ್ರತಿನಿಧಿ ವೈಷ್ಣವಿ ಉಪಸ್ಥಿತರಿದ್ದರು. ತುಳು ಅಕಾಡೆಮಿ ಸದಸ್ಯೆ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿದರು. ಐಶ್ವರ್ಯ ವಂದಿಸಿದರು. ಜಯಂತ್ ನಿರೂಪಿಸಿದರು.