ಮಲೇಷ್ಯಾ, ಟಿಮೋರ್-ಲೆಸ್ಟೆ, ಮ್ಯಾನ್ಮಾರ್ ಜತೆ ಕೃಷಿ ಸಹಕಾರ ವಿಸ್ತರಣೆಗೆ ಭಾರತ ಒತ್ತು
ನವದೆಹಲಿ: ಸಂಶೋಧನೆ, ತಂತ್ರಜ್ಞಾನ, ಕೃಷಿ ವ್ಯಾಪಾರ, ಆಹಾರ ಭದ್ರತೆ ಹಾಗೂ ಸಾಮರ್ಥ್ಯ ವೃದ್ಧಿಗೆ ಆದ್ಯತೆ ನೀಡಿ ಮಲೇಷ್ಯಾ, ಟಿಮೋರ್-ಲೆಸ್ಟೆ ಮತ್ತು ಮ್ಯಾನ್ಮಾರ್ ಜತೆ ಕೃಷಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಭಾರತ ಮುಂದಾಗಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸೆಪ್ಟೆಂಬರ್ 9ರಂದು ನವದೆಹಲಿಯಲ್ಲಿ ನಡೆದ 9ನೇ ಆಸಿಯಾನ್-ಭಾರತ ಕೃಷಿ ಮತ್ತು ಅರಣ್ಯ ಸಚಿವರ ಸಭೆ (AIMMAF)ಯ ಸಂದರ್ಭ ಮೂರು ದೇಶಗಳ ಕೃಷಿ ಸಚಿವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆ ನಡೆಸಿದರು.
ಮಲೇಷ್ಯಾದ ಕೃಷಿ ಮತ್ತು ಆಹಾರ ಭದ್ರತಾ ಸಚಿವ ಮೊಹಮ್ಮದ್ ಬಿನ್ ಸಾಬು ಅವರೊಂದಿಗೆ ನಡೆದ ಮಾತುಕತೆಯಲ್ಲಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಜ್ಞಾನ, ಪರಿಣತಿ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಹೆಚ್ಚಿಸುವ ಕುರಿತು ಚರ್ಚಿಸಲಾಯಿತು.
ಜಂಟಿ ಕೃಷಿ ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಉತ್ತೇಜನ ನೀಡಲು ತಿಳಿವಳಿಕೆ ಒಪ್ಪಂದ (MoU) ಮೂಲಕ ಸಾಂಸ್ಥಿಕ ಚೌಕಟ್ಟು ರೂಪಿಸುವ ಆಸಕ್ತಿಯನ್ನು ಎರಡೂ ದೇಶಗಳು ವ್ಯಕ್ತಪಡಿಸಿದವು. ಜರ್ಮ್‌ಪ್ಲಾಸಂ ವಿನಿಮಯ, ಕೃಷಿ ಉತ್ಪನ್ನಗಳ ವ್ಯಾಪಾರ ಹಾಗೂ ಮಾರುಕಟ್ಟೆ ಪ್ರವೇಶದ ಕುರಿತೂ ಚರ್ಚೆ ನಡೆಯಿತು.

ಟಿಮೋರ್-ಲೆಸ್ಟೆ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಸಚಿವ ಮಾರ್ಕೋಸ್ ಡಾ ಕ್ರೂಜ್ ಅವರೊಂದಿಗೆ ನಡೆದ ಸಭೆಯಲ್ಲಿ, ಭಾರತದ ಕೃಷಿ ಅನುಭವ ಹಾಗೂ ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವ ಸಿದ್ಧತೆಯನ್ನು ಚೌಹಾಣ್ ವ್ಯಕ್ತಪಡಿಸಿದರು.
ವಿಜ್ಞಾನಿಗಳು, ತಜ್ಞರು ಮತ್ತು ಮಾನವ ಸಂಪನ್ಮೂಲಗಳ ವಿನಿಮಯದ ಮೂಲಕ ಸಂಶೋಧನೆ ಹಾಗೂ ನಾವೀನ್ಯತೆ ಸಾಮರ್ಥ್ಯ ಹೆಚ್ಚಿಸುವ ಕುರಿತು ಚರ್ಚಿಸಲಾಯಿತು. ಕೃಷಿ, ಅರಣ್ಯ, ಪಶುಸಂಗೋಪನೆ ಹಾಗೂ ಜಲಚರ ಸಾಕಣೆಯ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಅಧ್ಯಯನ ಮಾಡಿ ಸಲಹೆ ನೀಡಲು ತಾಂತ್ರಿಕ ತಜ್ಞರ ತಂಡ ಕಳುಹಿಸುವಂತೆ ಟಿಮೋರ್-ಲೆಸ್ಟೆ ಪ್ರಸ್ತಾಪಿಸಿತು.
ಮ್ಯಾನ್ಮಾರ್‌ನ ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ನೀರಾವರಿ ಸಚಿವ ಮಿನ್ ನಾಂಗ್ ಅವರೊಂದಿಗೆ ನಡೆದ ಸಭೆಯಲ್ಲಿ ಕೃಷಿ ಸಹಕಾರ ಕುರಿತ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಲಾಯಿತು.
ಸುಮಾರು 1,600 ಕಿ.ಮೀ. ಹಂಚಿಕೆಯ ಗಡಿ ಹಾಗೂ ದೀರ್ಘಕಾಲದ ಜನರ ನಡುವಿನ ಬಾಂಧವ್ಯವನ್ನು ಉಲ್ಲೇಖಿಸಿದ ಚೌಹಾಣ್, ಕೃಷಿ ವ್ಯಾಪಾರ ವಿಸ್ತರಣೆಗೆ ಇರುವ ಅವಕಾಶಗಳ ಕುರಿತು ಚರ್ಚಿಸಿದರು.
ದ್ವಿದಳ ಧಾನ್ಯ, ಹತ್ತಿ, ಹೈನುಗಾರಿಕೆ ಅಭಿವೃದ್ಧಿ ಮತ್ತು ಕೃಷಿ ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಕುರಿತು ಉಭಯ ದೇಶಗಳು ಮಾತುಕತೆ ನಡೆಸಿದವು. ಮ್ಯಾನ್ಮಾರ್‌ನಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು.
ಸೆಪ್ಟೆಂಬರ್ 8–9ರಂದು ನವದೆಹಲಿಯಲ್ಲಿ ನಡೆದ 9ನೇ AIMMAF ಸಭೆಯ ಅಂಗವಾಗಿ ಈ ದ್ವಿಪಕ್ಷೀಯ ಮಾತುಕತೆಗಳು ನಡೆದವು.