ಬೆಂಗಳೂರಿನಲ್ಲಿ ಲೇಬಲಿಂಗ್ ಉಲ್ಲಂಘನೆ; ₹13.79 ಲಕ್ಷ ಮೌಲ್ಯದ ವೈದ್ಯಕೀಯ ಸಾಧನ ವಶ
ಬೆಂಗಳೂರು: ಕಡ್ಡಾಯ ಲೇಬಲಿಂಗ್ ನಿಯಮ ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಬೆಂಗಳೂರಿನ ಕಾಟನ್‌ಪೇಟೆಯ ಎರಡು ಸಂಸ್ಥೆಗಳಿಂದ ₹13.79 ಲಕ್ಷ ಮೌಲ್ಯದ ವೈದ್ಯಕೀಯ ಸಾಧನಗಳು ಮತ್ತು ಉಪಭೋಗ್ಯ ವಸ್ತುಗಳನ್ನು ವಶಪಡಿಸಿಕೊಂಡಿದೆ.
ನವೆಂಬರ್ 11 ಮತ್ತು 12ರಂದು ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ಮಂದೇವ್ ಸುರ್ಗಿಫಾರ್ಮಾ ಪ್ರೈವೇಟ್ ಲಿಮಿಟೆಡ್‌ನಿಂದ ₹6.57 ಲಕ್ಷ ಹಾಗೂ ಶ್ರೀ ಮಂದೇವ್ ಸರ್ಜಿಕಲ್ಸ್‌ನಿಂದ ₹7.21 ಲಕ್ಷ ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರವಣ ಸಾಧನಗಳು, ಕ್ಲಿನಿಕಲ್ ಥರ್ಮಾಮೀಟರ್‌ಗಳು, ಸರ್ಜಿಕಲ್ ಗ್ಲೌಸ್‌ಗಳು, ಮೂತ್ರ ಚೀಲಗಳು ಮತ್ತು ಕಂಪ್ರೆಷನ್ ಸ್ಟಾಕಿಂಗ್ಸ್ ಸೇರಿದಂತೆ ಹಲವು ವೈದ್ಯಕೀಯ ಉತ್ಪನ್ನಗಳಲ್ಲಿ ಕಡ್ಡಾಯ ಲೇಬಲಿಂಗ್ ವಿವರಗಳಿಲ್ಲದಿರುವುದು ಪತ್ತೆಯಾಗಿದೆ. ಬ್ಯಾಚ್ ಸಂಖ್ಯೆ, ತಯಾರಿಕೆ ಮತ್ತು ಮುಕ್ತಾಯ ದಿನಾಂಕ, ತಯಾರಕರ ಮಾಹಿತಿ, ಪರವಾನಗಿ ಸಂಖ್ಯೆ ಹಾಗೂ ಗರಿಷ್ಠ ಚಿಲ್ಲರೆ ಬೆಲೆ (MRP) ನಮೂದಿಸದಿರುವುದು ಪ್ರಮುಖ ಉಲ್ಲಂಘನೆಯಾಗಿದೆ.

ವಶಪಡಿಸಿಕೊಂಡ ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ಆಧರಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ರೋಗಿಗಳ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿರುವ ಸಚಿವರು, ಗ್ರಾಹಕರು ಅಧಿಕೃತ ಮಾರಾಟಗಾರರಿಂದಲೇ ವೈದ್ಯಕೀಯ ಸಾಧನಗಳನ್ನು ಖರೀದಿಸಿ, ಲೇಬಲ್, ಬ್ಯಾಚ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.