ಆಲಮಟ್ಟಿ ಯೋಜನೆಗೆ ಧಕ್ಕೆ ತರುವ ಯಾವುದೇ ಪ್ರಯತ್ನ ಸಹಿಸುವುದಿಲ್ಲ; ಮಹಾರಾಷ್ಟ್ರಕ್ಕೆ ಕರ್ನಾಟಕದ ಖಡಕ್ ಸಂದೇಶ
ವಿಜಯಪುರ: ಮಹಾರಾಷ್ಟ್ರದ ಕೃಷ್ಣಾ ನದಿ ನೀರನ್ನು ಭೀಮಾ ನದಿಗೆ ವರ್ಗಾಯಿಸುವ ಪ್ರಸ್ತಾವನೆಗೆ ಕರ್ನಾಟಕದ ಜಲಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಅಕ್ಟೋಬರ್ 9ರಂದು ಮುಂಬೈನಲ್ಲಿ ನಡೆದ ‘ಇಂಡಿಯಾ ಟುಡೇ ಕಾನ್‌ಕ್ಲೇವ್–2026’ರಲ್ಲಿ ಮಹಾಬಲೇಶ್ವರ ಸಮೀಪ ಕೃಷ್ಣಾ ನದಿಯಿಂದ 40 ಟಿಎಂಸಿ ಅಡಿ ಪ್ರವಾಹದ ನೀರನ್ನು ಭೀಮಾ ನದಿಯ ಉಜ್ಜನಿ ಜಲಾಶಯಕ್ಕೆ ವರ್ಗಾಯಿಸುವ ಯೋಜನೆ ಪ್ರಸ್ತಾಪಿಸಿದ್ದಾರೆ. ಸುಮಾರು ₹19,000 ಕೋಟಿ ವೆಚ್ಚದ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ₹24 ಕೋಟಿ ಮಂಜೂರು ಮಾಡಲಾಗಿದೆ. 84 ಕಿ.ಮೀ. ಮಾರ್ಗದಲ್ಲಿ ಸಮೀಕ್ಷೆ ನಡೆಸಲು ಸಿದ್ಧತೆ ನಡೆದಿದ್ದು, 2026ರ ಅಂತ್ಯದ ವೇಳೆಗೆ ಡಿಪಿಆರ್ ಸಿದ್ಧವಾಗುವ ನಿರೀಕ್ಷೆಯಿದೆ ಎಂದರು.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2ರ ತೀರ್ಪಿನ ಪ್ರಕಾರ ಹೆಚ್ಚುವರಿ 448 ಟಿಎಂಸಿ ಅಡಿ ನೀರಿನಲ್ಲಿ ಮಹಾರಾಷ್ಟ್ರಕ್ಕೆ 81, ಕರ್ನಾಟಕಕ್ಕೆ 173 ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ 194 ಟಿಎಂಸಿ ಅಡಿ ಹಂಚಿಕೆಯಾಗಿದೆ. ಈ ಹಿಂದೆ 35 ಟಿಎಂಸಿ ಅಡಿ ನೀರು ವರ್ಗಾವಣೆಯ ಮಹಾರಾಷ್ಟ್ರದ ಪ್ರಸ್ತಾವನೆಯನ್ನು ನ್ಯಾಯಮಂಡಳಿ ಒಪ್ಪಿರಲಿಲ್ಲ ಎಂದು ತಿಳಿಸಿದರು.
ತೀರ್ಪು ಇನ್ನೂ ಗೆಜೆಟ್‌ನಲ್ಲಿ ಅಧಿಸೂಚಿತವಾಗಿಲ್ಲದಿರುವಾಗ ಮಹಾರಾಷ್ಟ್ರದ ಯೋಜನೆಗೆ ಯಾವ ಕಾನೂನು ಆಧಾರವಿದೆ? ಕೇಂದ್ರದ ಅನುಮೋದನೆ ಹಾಗೂ ವಿಶ್ವಬ್ಯಾಂಕ್ ನೆರವಿಗೆ ಆಧಾರವೇನು ಎಂದು ಪಾಟೀಲ್ ಪ್ರಶ್ನಿಸಿದರು.
ಇದೇ ಕಾರಣ ನೀಡಿ ಕರ್ನಾಟಕದ ಆಲಮಟ್ಟಿ ಮೇಲ್ದಂಡೆ ಯೋಜನೆ ಹಂತ-3ರ ಡಿಪಿಆರ್ ಅನ್ನು ಕೇಂದ್ರ ಸರ್ಕಾರ ಹಿಂದಿರುಗಿಸುತ್ತಿದೆ. ಹಾಗಿದ್ದರೆ ಮಹಾರಾಷ್ಟ್ರದ ಯೋಜನೆಗೂ ಇದೇ ಮಾನದಂಡ ಅನ್ವಯಿಸಬೇಕು ಎಂದರು.
ನೀರು ವರ್ಗಾವಣೆ ಕಾಮಗಾರಿಗಳಿಂದ ಆಲಮಟ್ಟಿ ಜಲಾಶಯದ ಒಳಹರಿವು ಮತ್ತು ಕೆಳಹಂತದ ರಾಜ್ಯಗಳ ನೀರಿನ ಲಭ್ಯತೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಜಲಹಕ್ಕು, ಆಲಮಟ್ಟಿ ಯೋಜನೆ ಹಾಗೂ ರೈತರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.