Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಧಾರ್ಮಿಕಪ್ರಾದೇಶಿಕ

ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ

By ANU News
August 14, 2026 1 Min Read
0

ಚಾಮರಾಜನಗರ : ಶ್ರಾವಣ ಮಾಸ ಪ್ರಾರಂಭವಾದ ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಗುರುವಾರ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ 108 ಕುಂಭಾಭಿಷೇಕ ಮಹೋತ್ಸವವು ಭಕ್ತಿ, ವೈಭವದಿಂದ ನೆರವೇರಿತು.

ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಪಟ್ಟದ ಡಾ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗೂ ಬೇಡಗಂಪಣ ಅರ್ಚಕರ ವತಿಯಿಂದ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ವಿವಿಧ ಧಾರ್ಮಿಕ ಪೂಜೆಗಳು ಜರುಗಿದವು.

ಶ್ರಾವಣ ಮಾಸದ ಮೊದಲ ದಿನದ ಅಂಗವಾಗಿ ಮುಂಜಾನೆ 3.30ರಿಂದ ರುದ್ರಾಭಿಷೇಕ, ಬಿಲ್ವಾರ್ಚನೆ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಮಹಾಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

108 ಕುಂಭಗಳ ಮಹಾ ಕುಂಭಾಭಿಷೇಕ ನೆರವೇರಿತು. ಉಪವಾಸವಿದ್ದ ಬೇಡಗಂಪಣ ಸಮುದಾಯದ ಅರ್ಚಕರು ಶಿವ-ಪಾರ್ವತಿಯ ಉತ್ಸವ ಮೂರ್ತಿಯೊಂದಿಗೆ ಸತ್ತಿಗೆ, ಸೂರಿಪಾಸಿ, ಛತ್ರಿ, ಚಾಮರ, ನಂದಿಕಂಬ ಹಾಗೂ ಮಂಗಳವಾದ್ಯಗಳೊಂದಿಗೆ ದೇಗುಲದ ಸಮೀಪದ ಮಜ್ಜನ ಬಾವಿಗೆ ತೆರಳಿದರು. ಅಲ್ಲಿ 108 ಕುಂಭ ಕಳಸಗಳಿಗೆ ಪವಿತ್ರ ಜಲವನ್ನು ತುಂಬಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಳಸಗಳನ್ನು ಹೊತ್ತ ಅರ್ಚಕರು ಮೆರವಣಿಗೆಯಲ್ಲಿ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಚಪ್ಪರದ ಮಾಳಿಗೆಯಲ್ಲಿ ಕುಂಭಕಳಸಗಳನ್ನು ಪ್ರತಿಷ್ಠಾಪಿಸಿ, ಸಾಲೂರು ಶ್ರೀಗಳ ಸಾನ್ನಿಧ್ಯದಲ್ಲಿ ಹೋಮ-ಹವನ ನೆರವೇರಿಸಿದರು.

ಬಳಿಕ ಗರ್ಭಗುಡಿಯಲ್ಲಿ ಪೂರ್ಣಾಹುತಿ ನೆರವೇರಿಸಿ ಶ್ರೀ ಮಹದೇಶ್ವರ ಸ್ವಾಮಿಗೆ 108 ಕುಂಭಗಳ ಪವಿತ್ರ ಜಲದಿಂದ ಮಹಾ ಕುಂಭಾಭಿಷೇಕ ಮಾಡಲಾಯಿತು.

ಈ ವೇಳೆ 108 ಎಳನೀರು, ಹಾಲು, ಗಂಧ ಹಾಗೂ ಪಂಚಾಮೃತ ಅಭಿಷೇಕ, ಲಕ್ಷ ಬಿಲ್ವಾರ್ಚನೆ ನೆರವೇರಿಸಿ ನೈವೇದ್ಯ ಸಮರ್ಪಿಸಲಾಯಿತು.

ಶ್ರಾವಣ ಮಾಸದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ದೇಗುಲವನ್ನು ವಿವಿಧ ಬಗೆಯ ಪುಷ್ಪಗಳು, ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿದ್ಯುತ್ ದೀಪಾಲಂಕಾರದಿಂದ ದೇವಾಲಯದ ಆವರಣ ಕಂಗೊಳಿಸುತ್ತಿತ್ತು.

ಕುಂಭಾಭಿಷೇಕದ ಬಳಿಕ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಚಾಮರಾಜನಗರ, ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು “ಉಘೇ ಮಾದಪ್ಪ, ಜೈ ಮಹದೇಶ್ವರ” ಎಂದು ಜಯಘೋಷ ಮೊಳಗಿಸಿದರು.

ಭಕ್ತರು ಮುಡಿಸೇವೆ, ಪಂಜಿನ ಸೇವೆ, ರಜಸೇವೆ ಹಾಗೂ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ವಾಹನ ಉತ್ಸವಗಳಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ, ಉಪಕಾರ್ಯದರ್ಶಿ ಚಂದ್ರಶೇಖರ್, ಲೇಕ್ಕಾಧಿಕಾರಿ ಮಹಾದೇವ, ಆಗಮಿಕರಾದ ಕರವೀರ ಸ್ವಾಮಿ ಹಾಗೂ ಬೇಡಗಂಪಣ ಅರ್ಚಕರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ರೈಲ್‌ಒನ್‌ಗೆ ಭರ್ಜರಿ ಸ್ಪಂದನೆ; ದಿನಕ್ಕೆ 10 ಲಕ್ಷ ಟಿಕೆಟ್ ಬುಕಿಂಗ್

Next

ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕದ 17 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪದಕ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಹನೂರು: ವೀರಪ್ಪನ್’ನಿಂದ ಹುತಾತ್ಮರಾದ ಪೊಲೀಸರಿಗೆ ಶ್ರದ್ಧಾಂಜಲಿ
    • ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ
    • Salim Ahmed Elected Karnataka Legislative Council Chairman
    • SC Stays Madras HC Order Scrapping TN Govt Jobs for Karur Stampede Victims’ Kin
    • ಕರೂರ್ ಕಾಲ್ತುಳಿತ: ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ; ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
    Copyright 2026 — ANU News. All rights reserved. Blogsy WordPress Theme