ಏಷ್ಯನ್ ಗೇಮ್ಸ್ 2026ರ 85 ಪದಕಗಳ ಸಾಧನೆಗೆ ಮೋದಿ ಮೆಚ್ಚುಗೆ; 2036ರ ಒಲಿಂಪಿಕ್ಸ್ ಆತಿಥ್ಯದ ಪ್ರಸ್ತಾಪ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಏಷ್ಯನ್ ಗೇಮ್ಸ್ 2026ರ ಭಾರತೀಯ ತಂಡದ ಕ್ರೀಡಾಪಟುಗಳು, ತರಬೇತುದಾರರು, ಸಹಾಯಕ ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಸಂವಾದ ನಡೆಸಿ, ದೇಶಕ್ಕೆ ಹೆಮ್ಮೆ ತಂದ ಸಾಧನೆಗಳಿಗಾಗಿ ಅಭಿನಂದಿಸಿದರು.
ಕ್ರೀಡಾಪಟುಗಳು ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ವಿವಿಧ ಕ್ರೀಡೆಗಳಲ್ಲಿ ಭಾರತ ಗಳಿಸಿದ 85 ಪದಕಗಳನ್ನು ಸಾಮೂಹಿಕ ರಾಷ್ಟ್ರೀಯ ಯಶಸ್ಸು ಎಂದು ಬಣ್ಣಿಸಿದರು. ಹಾಕಿ, ಕ್ರಿಕೆಟ್, ಕಬಡ್ಡಿ, ಬಿಲ್ಲುಗಾರಿಕೆ, ಶೂಟಿಂಗ್, ಬಾಕ್ಸಿಂಗ್, ಕುಸ್ತಿ ಮತ್ತು ಅಥ್ಲೆಟಿಕ್ಸ್ನಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದರು.
ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ಚಿನ್ನದ ಪದಕ ಗೆದ್ದಿದ್ದಕ್ಕಾಗಿ ವಿಶೇಷ ಅಭಿನಂದನೆ ಸಲ್ಲಿಸಿದರು. ಮಹಿಳಾ ಹಾಕಿ ತಂಡವು 44 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿರುವುದನ್ನು ಉಲ್ಲೇಖಿಸಿದರು. 11 ಚಿನ್ನ ಸೇರಿದಂತೆ ಒಟ್ಟು 38 ಪದಕಗಳನ್ನು ಗೆಲ್ಲುವಲ್ಲಿ ಮಹಿಳಾ ಕ್ರೀಡಾಪಟುಗಳು ನೀಡಿದ ಕೊಡುಗೆಯನ್ನೂ ಪ್ರಶಂಸಿಸಿದರು.

‘ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್’ (TOPS) ಮತ್ತು ‘ಖೇಲೋ ಇಂಡಿಯಾ’ದಂತಹ ಉಪಕ್ರಮಗಳು ಕಳೆದ ದಶಕದಲ್ಲಿ ಭಾರತದ ಕ್ರೀಡಾ ವ್ಯವಸ್ಥೆಯನ್ನು ಬಲಪಡಿಸಿವೆ ಎಂದು ಮೋದಿ ಹೇಳಿದರು. ಕ್ರೀಡಾ ಮೂಲಸೌಕರ್ಯ, ತಳಮಟ್ಟದ ಸ್ಪರ್ಧೆಗಳು, ಕ್ರೀಡಾಪಟುಗಳಿಗೆ ನೆರವು ಮತ್ತು ಅಂತರರಾಷ್ಟ್ರೀಯ ಮಟ್ಟದ ತರಬೇತಿ ಅವಕಾಶಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಯುವ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲು ಪದಕ ವಿಜೇತರು ಶಾಲೆಗಳು ಮತ್ತು ತಮ್ಮ ಸ್ವಗ್ರಾಮಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು. ಕ್ರೀಡೆಯಿಂದ ಬೆಳೆಸಿಕೊಳ್ಳುವ ಶಿಸ್ತು, ಪರಿಶ್ರಮ ಮತ್ತು ದೃಢತೆ ಜೀವನದುದ್ದಕ್ಕೂ ನೆರವಾಗುತ್ತವೆ ಎಂದು ಹೇಳಿದರು.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್, 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಭಾರತದ ಯೋಜನೆ ಹಾಗೂ 2036ರ ಒಲಿಂಪಿಕ್ಸ್ ಆಯೋಜಿಸುವ ಮಹತ್ವಾಕಾಂಕ್ಷೆಯನ್ನೂ ಪ್ರಸ್ತಾಪಿಸಿದರು. ಹೊಸ ದಾಖಲೆಗಳನ್ನು ನಿರ್ಮಿಸಿ ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಯಾಗಿ ರೂಪಿಸಲು ಕ್ರೀಡಾಪಟುಗಳು ಶ್ರಮಿಸಬೇಕು ಎಂದು ಕರೆ ನೀಡಿದರು.