ಬಿಜೆಪಿ ರಾಜ್ಯ ಅಧ್ಯಕ್ಷರ ಹೇಳಿಕೆ ನಾಚಿಕೆಗೇಡಿನ ಪರಮಾವಧಿ; ರಮೇಶ್ ಬಾಬು ಟೀಕಾಸ್ತ್ರ
ಬೆಂಗಳೂರು: ದೇಶದ ವಿದ್ಯಾರ್ಥಿಗಳ ಮತ್ತು ಯುವ ಜನಾಂಗದ ಐತಿಹಾಸಿಕ ಪ್ರತಿಭಟನೆಯ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಶಿಕ್ಷಣ ಸಚಿವರ ರಾಜಿನಾಮೆಯನ್ನು ರಾಜಕೀಯ ಕಾರಣಗಳಿಗೆ ಹೋಲಿಕೆ ಮಾಡಲು ಹೋಗಿ ಕರ್ನಾಟಕ ಬಿಜೆಪಿ ಬಾಲ ಭವನದ ಅಧ್ಯಕ್ಷ ವಿಜಯೇಂದ್ರ ಅವರು ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಂಡಿರುತ್ತಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ವಿಜಯೇಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ರಾಜಕೀಯ ಹೇಳಿಕೆ ನೀಡುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಮತ್ತು ಕರ್ನಾಟಕ ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ರವರ ಹೆಸರುಗಳನ್ನು ಬಳಸಿಕೊಂಡು ಟೀಕೆ ಮಾಡುವ ನೆಪದಲ್ಲಿ ತಾವೇ ಬೆತ್ತಲಾಗಿರುತ್ತಾರೆ ಎಂದು ವಿಜಯೇಂದ್ರ ಬಗ್ಗೆ ಲೇವಡಿ ಮಾಡಿದ್ದಾರೆ.

ದೇಶದ 11 ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ನೀತಿಗೆಟ್ಟ ಆಡಳಿತದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುವುದರ ಜೊತೆಗೆ, ನೂರಾರು ವಿದ್ಯಾರ್ಥಿಗಳು ತಮ್ಮ ಪ್ರಾಣ ಮತ್ತು ಬದುಕನ್ನು ಕಳೆದುಕೊಂಡಿರುತ್ತಾರೆ. ಅವರ ಅಸಮಾಧಾನ ರಾಷ್ಟ್ರಮಟ್ಟದ ವಿದ್ಯಾರ್ಥಿ ಚಳುವಳಿಗೆ ಮತ್ತು ದೊಡ್ಡಮಟ್ಟದ ಪ್ರತಿಭಟನೆಗೆ ಕಾರಣವಾಗಿರುತ್ತದೆ. ದೇಶದಲ್ಲಿ ವಿದ್ಯಾರ್ಥಿಗಳ ಬದುಕನ್ನು ಬೀದಿಗೆ ತಂದ ಕಾರಣಕ್ಕಾಗಿ ಭಾರತೀಯ ಜನತಾ ಪಕ್ಷದ ಪರವಾಗಿ ಬಾಲ ಬಿಜೆಪಿ ಭವನದ ಅಧ್ಯಕ್ಷ ವಿಜಯೇಂದ್ರ ಅವರು ಕ್ಷಮೆ ಕೇಳಿದ್ದರೆ ಸ್ವಲ್ಪವಾದರೂ ಗೌರವ ಉರಿಯುತ್ತಿತ್ತು, ಆದರೆ ಕೆಪಿಸಿಸಿ ಅಧ್ಯಕ್ಷರನ್ನು ಮತ್ತು ರಾಜ್ಯ ಗೃಹ ಸಚಿವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿರುವುದು ಅವರ ರಾಜಕೀಯ ಎಲಸುತನದ ಜೊತೆಗೆ ನೈತಿಕತೆಯ ಅದೋಗತಿ ಆಗಿದೆ ರಮೇಶ್ ಬಾಬು ಬಣ್ಣಿಸಿದ್ದಾರೆ.
ಸೈದ್ಧಾಂತಿಕವಾಗಿ ಕೆಪಿಸಿಸಿ ಅಧ್ಯಕ್ಷರು ಮತ್ತು ಗೃಹ ಸಚಿವರು ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಸಂಘ ಪರಿವಾರದ ತಪ್ಪುಗಳನ್ನು ಟೀಕಿಸುತ್ತಿದ್ದಾರೆ ಮತ್ತು ಸಾರ್ವಜನಿಕ ಹಿತ ದೃಷ್ಟಿಯಿಂದ ಮಾಹಿತಿಯನ್ನು ನೀಡುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಪ್ರತಿದಿನ ತಮ್ಮ ತಂದೆ ಯೆಡಿಯೂರಪ್ಪ ನವರ ಹೆಸರನ್ನು ಬಳಸಿಕೊಂಡು ರಾಜಕೀಯ ಅಸ್ತಿತ್ವಕ್ಕೆ ಒದ್ದಾಡುತ್ತಿರುವ ವಿಜಯೇಂದ್ರ ಅವರು, ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುವುದನ್ನು ಹವ್ಯಾಸ ಮಾಡಿಕೊಂಡು ಅದನ್ನೇ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರದೇ ಪಕ್ಷದ ಅನೇಕ ಹಿರಿಯ ನಾಯಕರು ಎತ್ತಿರುವ ಧ್ವನಿಗಳಿಗೆ ಇಲ್ಲಿಯವರಿಗೆ ಸಾರ್ವಜನಿಕವಾಗಿ ಉತ್ತರ ಕೊಡಲು ಆಗದ ವಿಜಯೇಂದ್ರರವರು, ತಮ್ಮ ರಾಜಕೀಯ ಉಳಿವಿಗಾಗಿ ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ನಾಯಕ ರಮೇಶ್ ಬಾಬು ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಸಹಿಯನ್ನು ನಕಲು ಮಾಡಿದ ಆರೋಪ ಹಾಗೂ ನೀರಾವರಿ ಇಲಾಖೆಯಲ್ಲಿ 20,000 ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಆರೋಪವನ್ನು ಅವರದೇ ಪಕ್ಷದ ಶಾಸಕರು ಮಾಡಿದ್ದರೂ ಇಲ್ಲಿಯವರೆಗೂ ಇವರು ಉತ್ತರ ಕೊಡಲು ಸಾಧ್ಯವಾಗಿಲ್ಲ. ಬಹುಶಃ ಇಂತಹ ಆರೋಪಗಳಿಗೆ ಸಾರ್ವಜನಿಕವಾಗಿ ಉತ್ತರ ನೀಡಿದರೆ ಪಕ್ಷದಿಂದ ಆಚೆ ಹಾಕುವುದಾಗಿ ಸಂಘ ಪರಿವಾರದಿಂದ ಇವರಿಗೆ ನಿರ್ದೇಶನ ಬಂದಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಹರಿಹರ ಕ್ಷೇತ್ರದ ಶಾಸಕ ಹರೀಶ್ ರವರ ಮೇಲೆ ಮೊಟ್ಟೆ ಎಸೆದ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರರವರ ಷಡ್ಯಂತ್ರ ಇರುವ ಕುರಿತು ಅನುಮಾನ ಇರುತ್ತದೆ. ರಾಜಕೀಯವಾಗಿ ವಿಜಯೇಂದ್ರ ಮತ್ತು BS ಯಡಿಯೂರಪ್ಪನವರ ಗುಂಪಿಗೆ ವಿರುದ್ಧವಾಗಿ ಇರುವ ಹರೀಶ್ ರವರನ್ನು ರಾಜಕೀಯವಾಗಿ ಮುಗಿಸಲು ಇವರೇ ಮೊಟ್ಟೆ ಎಸೆಯಲು ಅವಕಾಶ ಮಾಡಿರಬಹುದು. ಹರೀಶ್ ರವರ ಮೇಲೆ ಇವರಿಗೆ ಇರುವ ವೈಯಕ್ತಿಕ ದ್ವೇಷ, ರಾಜಕೀಯ ದ್ವೇಷದ ಕಾರಣಕ್ಕಾಗಿ ಇಲ್ಲಿಯವರಿಗೆ ಈ ಘಟನೆಯನ್ನು ಖಂಡಿಸುವ ಪ್ರಯತ್ನವನ್ನೇ ವಿಜಯೇಂದ್ರ ಪ್ರಾಮಾಣಿಕವಾಗಿ ಮಾಡಿರುವುದಿಲ್ಲ. ಪಕ್ಷದಲ್ಲಿರುವ ಗುಂಪುಗಾರಿಕೆಯನ್ನು ತಡೆಯಲು ಸಾಧ್ಯವಾಗದೆ ಕೈ ಚೆಲ್ಲಿ ಕುಳಿತಿರುವ ವಿಜಯೇಂದ್ರರವರು ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡಿ ಸಂಘ ಪರಿವಾರವನ್ನು ಮೆಚ್ಚಿಸಲು ಹೊರಟಿರುತ್ತಾರೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿಯಲ್ಲಿ ಒಬ್ಬ ಸಮರ್ಥ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ವಿಫಲರಾಗಿರುವ ವಿಜಯೇಂದ್ರ ಅವರು, ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ.ಹರಿಪ್ರಸಾದ್ ಮತ್ತು ಗೃಹ ಸಚಿವರಾದ ಪ್ರಿಯಾಂಕ ಖರ್ಗೆ ರವರನ್ನು ಟೀಕೆ ಮಾಡುವ ಮೂಲಕ ಸಂಘ ಪರಿವಾರವನ್ನು ಮೆಚ್ಚಿಸಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಇದು ಅವರ ರಾಜಕೀಯ ಎಳಸುತನಕ್ಕೆ ಸಾಕ್ಷಿಯಾಗಿರುತ್ತದೆ. ಅವರು ಇಂತಹ ಏಳೆಸುತನದ ರಾಜಕೀಯ ಮಾಡುವ ಬದಲು ರಾಜ್ಯ ಬಿಜೆಪಿ ಬಾಲ ಭವನದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಬಹುಶಃ ಅವರಿಗೆ ಗೌರವ ಸಿಗಬಹುದು. ಅವರದೇ ಪಕ್ಷದ ಶಾಸಕರಾದ ಯತ್ನಾಳ್ ಎದುರಿಸಲು ಸಾಧ್ಯವಾಗದೆ ಮನೆಯಲ್ಲಿ ಅಡಗಿ ಕುಳಿತುಕೊಳ್ಳುವ ವಿಜಯೇಂದ್ರ ರವರು, ಕಾಂಗ್ರೆಸ್ ನಾಯಕರನ್ನು ಅಥವಾ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಬದಲು ಅವರ ತಂದೆ B.S.ಯಡಿಯೂರಪ್ಪ ನವರ ಬಳಿ ರಾಜಕೀಯ ಅನುಭವದ ಮಾತುಗಳನ್ನು ಆಲಿಸಿ ಕಲಿತುಕೊಳ್ಳುವುದು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ರಮೇಶ್ ಬಾಬು ಹೇಳಿದ್ದಾರೆ.