Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬರಗಾಲದಲ್ಲೂ ಸಂಪ್ರದಾಯ ಬಿಡಲು ಸಾಧ್ಯವಿಲ್ಲ: ‘ಕಾವೇರಿ ಆರತಿ ಆಡಂಬರವಲ್ಲ, ನಮ್ಮ ಪರಂಪರೆಯ ಪ್ರತೀಕ’ ಎಂದ ಸಚಿವ ಚಲುವರಾಯಸ್ವಾಮಿ

By ANU News
October 16, 2026 2 Min Read
0

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ನಾಡಿನ ಸಂಪ್ರದಾಯ ಮತ್ತು ಆಚರಣೆಗಳನ್ನು ಕೈಬಿಡಲು ಸಾಧ್ಯವಿಲ್ಲ. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಸರಾ ಮಹೋತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀರಂಗವೇದಿಕೆಯಲ್ಲಿ ಬುಧವಾರ ನಡೆದ 416ನೇ ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಪ್ರತಿಯೊಬ್ಬ ರೈತನ ಮನೆಯಲ್ಲೂ ಧಾನ್ಯಲಕ್ಷ್ಮಿ ತುಂಬಿರಲಿ ಎಂಬ ಆಶಯದೊಂದಿಗೆ ರಾಗಿ ತೂರುವ ಮೂಲಕ ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾವೇರಿ ಪೂಜೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಕಾವೇರಿ ತಾಯಿಯ ಮಕ್ಕಳು. ಆಕೆಯ ಕೃಪೆಯಿಂದಲೇ ನಮ್ಮ ಬದುಕು ಹಸನಾಗಲಿದೆ. ಹೀಗಾಗಿ ಕಾವೇರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವುದು ನಮ್ಮ ಜವಾಬ್ದಾರಿ. ಕಾವೇರಿ ಆರತಿ ಮತ್ತು ಶ್ರೀರಂಗಪಟ್ಟಣ ದಸರಾ ಎಂದಿಗೂ ಆಡಂಬರವಲ್ಲ; ಅವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕಗಳಾಗಿವೆ ಎಂದು ಚಲುವರಾಯಸ್ವಾಮಿ ಹೇಳಿದರು.

1610ರಲ್ಲಿ ಆರಂಭವಾದ ಶ್ರೀರಂಗಪಟ್ಟಣದ ದಸರಾ ಬಳಿಕ ಮೈಸೂರಿಗೂ ವಿಸ್ತರಿಸಿತು. ಈ ಬಾರಿ ಹಿರಿಯ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್ ಅವರು ದಸರಾ ಉದ್ಘಾಟಿಸಿರುವುದು ವಿಶೇಷ. ಮೈಸೂರಿನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿದ್ದ ಧನಂಜಯ ಆನೆ ಶ್ರೀರಂಗಪಟ್ಟಣ ದಸರಾದಲ್ಲೂ ಹೆಜ್ಜೆ ಹಾಕಿರುವುದು ಮತ್ತೊಂದು ವಿಶೇಷ ಎಂದು ತಿಳಿಸಿದರು.

ನಾಡಿನ ಜನರ ಒಳಿತಿಗಾಗಿ ನಡೆಯುತ್ತಿರುವ ದಸರಾ ಮತ್ತು ಕಾವೇರಿ ಆರತಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ. ಕನಿಷ್ಠ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಾದರೂ ಉತ್ತಮ ಮಳೆಯಾದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡಬಹುದು ಎಂಬ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ತಾಯಿ ಮತ್ತು ನಾಡದೇವತೆ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ದಸರಾ ಆಚರಣೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಮೇರುನಟ ಡಾ. ರಾಜ್‌ಕುಮಾರ್ ಅವರನ್ನು ದೂರದಿಂದಲೇ ಕೈಮುಗಿದು ನೋಡುತ್ತಿದ್ದೆವು. ನಟರಾದ ಅಂಬರೀಶ್, ವಿಷ್ಣುವರ್ಧನ್ ಮತ್ತು ರವಿಚಂದ್ರನ್ ಅವರು ನನಗೆ ಕುಟುಂಬದ ಸ್ನೇಹಿತರಿದ್ದಂತೆ. ಆದರೆ, ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ ಎಂದು ಚಲುವರಾಯಸ್ವಾಮಿ ಭಾವುಕರಾಗಿ ಸ್ಮರಿಸಿದರು.

ಕಾರ್ಯಕ್ರಮದ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಚಿವರು ಅಭಿನಂದಿಸಿದರು. ಬಳಿಕ ವೇದಿಕೆಯ ಮುಂಭಾಗದಲ್ಲಿ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತು. ಒಂದೆಡೆ ಸಂಗೀತ ಕಾರ್ಯಕ್ರಮಗಳ ರಸದೌತಣ, ಮತ್ತೊಂದೆಡೆ ಮಳೆಯ ಸದ್ದು ವಾತಾವರಣಕ್ಕೆ ಹೊಸ ಮೆರುಗು ನೀಡಿತು.

ಕನಿಷ್ಠ ಅಚ್ಚುಕಟ್ಟು ಪ್ರದೇಶದಲ್ಲಾದರೂ ಮಳೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ದಸರಾ ಉದ್ಘಾಟಿಸಲಾಗಿದೆ ಎಂದು ಸಚಿವರು ಹೇಳುತ್ತಿದ್ದಂತೆಯೇ ಮಳೆ ಮತ್ತಷ್ಟು ಬಿರುಸುಗೊಂಡಿತು. ಇದರಿಂದ ಶ್ರೀರಂಗಪಟ್ಟಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

ಅಕ್ಟೋಬರ್ 15ರಿಂದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಕ್ಟೋಬರ್ 18ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಮತ್ತು ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್, ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ವಿ. ನಾಗೇಂದ್ರ ಕುಮಾರ್, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ್, ಶೋಭಾರಾಣಿ, ಭಾನುಪ್ರಕಾಶ್ ಶರ್ಮ ಗುರೂಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ರಾಜ್ಯದ ಎಲ್ಲ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಮಾನದಂಡಗಳ ಕಡ್ಡಾಯ ಜಾರಿ: ಯು.ಟಿ. ಖಾದರ್

Next

‘Cauvery Arati Is Not Ostentation but Heritage’: Chaluvarayaswamy Defends Srirangapatna Dasara

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • B.K. Hariprasad Calls for Coordinated Congress Campaign in Hiriyur By-election
    • KRS Hosts Grand ‘Kaveri Aarti’, Blending Devotion, Culture and Light
    • ಕುರಾಕೊದಲ್ಲಿ ಭಾರತೀಯ ಕಂಪನಿಗಳಿಗೆ ಹೂಡಿಕೆ ಅವಕಾಶ: ನಿರ್ಮಲಾ ಸೀತಾರಾಮನ್ ಮಾತುಕತೆ
    • Kharge Urges Modi to Convene All-Party Meeting on Delimitation
    • ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ
    Copyright 2026 — ANU News. All rights reserved. Blogsy WordPress Theme