ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಆರೋಪ: ಕಠಿಣ ಕ್ರಮಕ್ಕೆ ವೇಣುಗೋಪಾಲ್ ಆಗ್ರಹ
ನವದೆಹಲಿ: ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅವಮಾನಿಸಿ, ಹಿಂಸೆ ಎಸಗಲಾಗಿದೆ ಎನ್ನಲಾದ ಘಟನೆಯನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಖಂಡಿಸಿದ್ದಾರೆ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವೇಣುಗೋಪಾಲ್, ಮಹಿಳೆಯನ್ನು ಬೆತ್ತಲೆಗೊಳಿಸಿ ‘ಶುದ್ಧೀಕರಣ ವಿಧಿ’ ನಡೆಸಲಾಗಿದೆ ಎಂಬ ಆರೋಪ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಮಾಜದಲ್ಲಿ ವಿಭಜನೆ ಮೂಡಿಸುವ ಕಾರ್ಯಸೂಚಿ ಹೊಂದಿವೆ ಎಂದು ಆರೋಪಿಸಿದ ಅವರು, ಈ ಘಟನೆಯನ್ನು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರ ಮತ್ತು ಬೆದರಿಕೆಯ ವ್ಯಾಪಕ ಸಮಸ್ಯೆಯ ಭಾಗವಾಗಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲಿನ ದಾಳಿಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ಛತ್ತೀಸ್‌ಗಢದಲ್ಲಿ ಸನ್ಯಾಸಿನಿಯರನ್ನು ಬಂಧಿಸಿರುವ ವರದಿಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಚರ್ಚ್‌ಗಳನ್ನು ಅಪವಿತ್ರಗೊಳಿಸಲಾಗಿದೆ ಎಂಬ ಆರೋಪಗಳನ್ನು ಉಲ್ಲೇಖಿಸಿದರು. ಇಂತಹ ಘಟನೆಗಳು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿವೆ ಎಂದು ದೂರಿದರು.
ಸಂವಿಧಾನದ 25ನೇ ವಿಧಿಯನ್ನು ಉಲ್ಲೇಖಿಸಿದ ವೇಣುಗೋಪಾಲ್, ಪ್ರತಿಯೊಬ್ಬರಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯ ಹಾಗೂ ತಮ್ಮ ಧರ್ಮವನ್ನು ಮುಕ್ತವಾಗಿ ಅನುಸರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿದೆ ಎಂದು ಹೇಳಿದರು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಭ್ರಾತೃತ್ವದಂತಹ ಸಾಂವಿಧಾನಿಕ ಮೌಲ್ಯಗಳನ್ನು ಇಂತಹ ಘಟನೆಗಳು ದುರ್ಬಲಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.