ಅಯೋಧ್ಯೆ ದೀಪೋತ್ಸವ ವೈಭವಕ್ಕೆ ಉಪರಾಷ್ಟ್ರಪತಿ ಚಾಲನೆ; ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿಗೆ ಮೆಚ್ಚುಗೆ
ಅಯೋಧ್ಯೆ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶನಿವಾರ ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ 10ನೇ ದೀಪೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸರಯೂ ನದಿ ದಡಗಳು ಲಕ್ಷಾಂತರ ಮಣ್ಣಿನ ದೀಪಗಳ ಬೆಳಕಿನಿಂದ ಕಂಗೊಳಿಸಿದವು.
ಇದಕ್ಕೂ ಮುನ್ನ ಶ್ರೀರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ರಾಮಾಯಣ ಆಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಗೀತಮಯ ಪಟಾಕಿ ಪ್ರದರ್ಶನ ವೀಕ್ಷಿಸಿದರು. ಬಳಿಕ ಸರಯೂ ಆರತಿಯಲ್ಲಿ ಪಾಲ್ಗೊಂಡರು.
ದೀಪೋತ್ಸವವು ಸಾರ್ವಜನಿಕರ ಭಾಗವಹಿಸುವಿಕೆಯ ಬೃಹತ್ ಹಬ್ಬವಾಗಿ ಬೆಳೆದಿದ್ದು, ಭಾರತದ ಸಾಮೂಹಿಕ ನಂಬಿಕೆ ಮತ್ತು ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದು ರಾಧಾಕೃಷ್ಣನ್ ಹೇಳಿದರು. 2017ರಲ್ಲಿ 1.7 ಲಕ್ಷ ದೀಪಗಳೊಂದಿಗೆ ಆರಂಭವಾದ ಉತ್ಸವ, 2025ರಲ್ಲಿ 26 ಲಕ್ಷ ದೀಪಗಳನ್ನು ದಾಟಿದೆ ಎಂದು ತಿಳಿಸಿದರು.

ಈ ವರ್ಷದ ಆಚರಣೆಯಲ್ಲಿ 30 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಗುರಿ ಹೊಂದಲಾಗಿತ್ತು. ಉತ್ಸವವು ಕುಂಬಾರರು, ಕರಕುಶಲಕರ್ಮಿಗಳು, ಗ್ರಾಮೀಣ ಮಹಿಳೆಯರು ಮತ್ತು ಕಲಾವಿದರಿಗೆ ಉದ್ಯೋಗಾವಕಾಶ ಕಲ್ಪಿಸಿದೆ ಎಂದರು.
ರಾಮಾಯಣದ ದೃಶ್ಯಗಳನ್ನು 2,100ಕ್ಕೂ ಹೆಚ್ಚು ಸ್ವದೇಶಿ ಡ್ರೋನ್‌ಗಳ ಮೂಲಕ ಪ್ರದರ್ಶಿಸಲಾಗಿದ್ದು, ಯುವಜನರು ರಾಮಾಯಣದ ಮೌಲ್ಯಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು. ಅಭಿವೃದ್ಧಿ ಮತ್ತು ಪರಂಪರೆಯ ಸಮನ್ವಯಕ್ಕೆ ಅಯೋಧ್ಯೆ ಉತ್ತಮ ಉದಾಹರಣೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.