ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ: ರಾಹುಲ್ ಗಾಂಧಿ
ನವದೆಹಲಿ: ‘ವೋಟ್ ಚೋರಿ’ (ಮತಗಳ ಕಳ್ಳತನ) ಭಾರತೀಯ ಜನರ ವಿರುದ್ಧದ ಅಪರಾಧ. ಇದು ಸಂವಿಧಾನದ ಮೇಲಿನ ನೇರ ದಾಳಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬುಧವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಮತಗಳ ಕಳ್ಳತನದ ಹಿಂದೆ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ಭಾಗಿಯಾಗಿವೆ ಎಂದು ಆರೋಪಿಸಿದ್ದಾರೆ.
‘ವೋಟ್ ಚೋರಿ ಭಾರತೀಯ ಜನರ ವಿರುದ್ಧದ ಅಪರಾಧ. ನಮ್ಮ ಸಂವಿಧಾನದ ಮೇಲಿನ ನೇರ ದಾಳಿ. ಇದನ್ನು ಸಂಘಟಿಸಿದ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಚುನಾವಣಾ ಆಯೋಗ ದೇಶದ್ರೋಹದ ಕೃತ್ಯ ಎಸಗಿವೆ. ಆದರೆ ಇವೆಲ್ಲದಕ್ಕೂ ನ್ಯಾಯ ಸಿಗಲಿದೆ’ ಎಂದು ಅವರು ಹೇಳಿದ್ದಾರೆ.

SIR ಬಗ್ಗೆ ಆಕ್ಷೇಪ?
ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಆಯೋಗದೊಳಗೇ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ಬೆನ್ನಲ್ಲೇ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದಾರೆ.
ವರದಿಗಳ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ನಿರ್ಧಾರಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಮತದಾರರ ಹೆಸರು ಅಳಿಸುವುದು ಮತ್ತು ಮರು ಸೇರ್ಪಡೆ, ಹೊಸ ಮತದಾರರ ನೋಂದಣಿ, ಮತದಾರರ ಪಟ್ಟಿಗೆ ಸಂಬಂಧಿಸಿದ ಮೇಲ್ಮನವಿ ಹಾಗೂ ಮತದಾರರ ದತ್ತಾಂಶ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಆಕ್ಷೇಪ ವ್ಯಕ್ತವಾಗಿತ್ತು ಎಂದು ವರದಿಗಳು ತಿಳಿಸಿವೆ.
ಮತದಾರರ ನೋಂದಣಿಗೆ ಬಳಸುವ ಫಾರ್ಮ್-6ರಲ್ಲಿ ಮಾಡಲಾದ ಬದಲಾವಣೆಗಳು ಹಾಗೂ ಮತದಾರರ ಪಟ್ಟಿಯ ದತ್ತಾಂಶವನ್ನು ಕೇಂದ್ರೀಕರಿಸುವ ಕ್ರಮಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು ಎನ್ನಲಾಗಿದೆ.
Vote chori is a crime against the Indian people and a direct attack on our constitution.
The BJP, RSS and EC who organised it have committed an act of treason.
Justice will be served. https://t.co/30kX06CBiH
— Rahul Gandhi (@RahulGandhi) September 23, 2026
‘ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದ’
ಈ ವರದಿಗಳ ಬೆನ್ನಲ್ಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. SIR ಸೇರಿದಂತೆ ಆಯೋಗದ ಎಲ್ಲ ನಿರ್ಧಾರಗಳನ್ನೂ ಮೂವರು ಚುನಾವಣಾ ಆಯುಕ್ತರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘SIR ಸೇರಿದಂತೆ ಭಾರತದ ಚುನಾವಣಾ ಆಯೋಗದ ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದ ಹಾಗೂ ಇಬ್ಬರು ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಯೊಂದಿಗೆ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಯೋಗದ ಸದಸ್ಯರು ಯಾವುದೇ ವಿಷಯದ ಕುರಿತು ವೈಯಕ್ತಿಕ ಅಭಿಪ್ರಾಯ ಅಥವಾ ಆಕ್ಷೇಪ ವ್ಯಕ್ತಪಡಿಸಬಹುದು. ಆದರೆ ಅಂತಿಮವಾಗಿ ಆಯೋಗ ಕೈಗೊಳ್ಳುವ ನಿರ್ಧಾರಗಳು ಸರ್ವಾನುಮತದಿಂದಲೇ ಆಗಿವೆ ಎಂದು EC ಮೂಲಗಳು ತಿಳಿಸಿವೆ.