₹5 ಕೋಟಿ ಮೌಲ್ಯದ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ಓರ್ವ ಬಂಧನ
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬೃಹತ್ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಫಾರ್ಮ್ಹೌಸ್ವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಿಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರಿಂದ ಫಾರ್ಮ್ಹೌಸ್ನ್ನು ಲೀಸ್ಗೆ ಪಡೆದಿದ್ದ ಪ್ರಶಾಂತ್ ಎಂಬಾತ ಕಳೆದ ಒಂದು ವರ್ಷದಿಂದ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಔಷಧಿಗಳನ್ನು ತರಿಸಿ, ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ಲೇಬಲ್ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ₹600 ಮೌಲ್ಯದ ಔಷಧಿಗಳಿಗೆ ₹6,000ರಿಂದ ₹8,000 ಮೌಲ್ಯದ ಔಷಧಿಗಳ ಲೇಬಲ್ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳನ್ನೂ ಇದೇ ರೀತಿ ಮರುಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

30ಕ್ಕೂ ಹೆಚ್ಚು ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕಲಿ ಔಷಧಿಗಳು, ಲೇಬಲ್ಗಳು, ಅವಧಿ ಮೀರಿದ ಔಷಧಿಗಳು ಹಾಗೂ ಖಾಲಿ ಬಾಟಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಚೇತನ್ಗಾಗಿ ಶೋಧ ಮುಂದುವರಿದಿದೆ. ನಕಲಿ ಔಷಧಿಗಳನ್ನು ಎಲ್ಲೆಲ್ಲಿಗೆ ಪೂರೈಸಲಾಗುತ್ತಿತ್ತು ಮತ್ತು ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.