‘ಭಾರತಿ ರಾಜ ಹೆಸರು ತಮಿಳು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ’; ರಜನಿಕಾಂತ್
ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕ, ನಟ ಹಾಗೂ ಗ್ರಾಮೀಣ ಕಥನಶೈಲಿಗೆ ಹೊಸ ದಿಕ್ಕು ನೀಡಿದ ಖ್ಯಾತ ಚಲನಚಿತ್ರಕಾರ ಭಾರತಿ ರಾಜ (86) ಬುಧವಾರ ಮುಂಜಾನೆ ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
1977ರಲ್ಲಿ ಬಿಡುಗಡೆಯಾದ ‘16 ವಯತಿನಿಲೆ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಭಾರತಿ ರಾಜ, ತಮಿಳು ಸಿನೆಮಾದಲ್ಲಿ ಗ್ರಾಮೀಣ ಬದುಕು ಮತ್ತು ನೈಜ ಕಥೆಗಳನ್ನು ತೆರೆಗೆ ತಂದು ಹೊಸ ಪರಂಪರೆಯನ್ನು ನಿರ್ಮಿಸಿದ್ದರು. ‘ಸಿಗಪ್ಪು ರೋಜಕ್ಕಲ್’, ‘ಅಲೈಗಲ್ ಒಯಿವತಿಲ್ಲೈ’, ‘ಕಾದಲ್ ಓವಿಯಂ’ ಹಾಗೂ ‘ಮುದಲ್ ಮರಿಯಥೈ’ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ಅವರು ನೀಡಿದ್ದರು.

ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ನಟ ರಜನಿಕಾಂತ್, “ಭಾರತಿ ರಾಜ ಅವರು ಐದು ದಶಕಗಳ ಕಾಲ ನನ್ನ ಸ್ನೇಹಿತರಾಗಿದ್ದರು. ಅನೇಕ ನಟರು, ನಟಿಯರು ಮತ್ತು ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಅವರು, ತಮಿಳು ಸಿನೆಮಾಗೆ ಹೊಸ ಜೀವ ತುಂಬಿದರು. ಅವರ ಸೃಷ್ಟಿಗಳು ಎಂದಿಗೂ ಮರೆಯಾಗುವುದಿಲ್ಲ. ಅವರ ಹೆಸರು ತಮಿಳು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ” ಎಂದು ಭಾವುಕರಾದರು.
ಭಾರತಿ ರಾಜ ಅವರ ಸರಳತೆ ಮತ್ತು ನೇರ ವ್ಯಕ್ತಿತ್ವವನ್ನು ಸ್ಮರಿಸಿದ ರಜನಿಕಾಂತ್, “ಅವರು ಮನಸ್ಸಿನಲ್ಲಿದ್ದುದನ್ನು ಮುಕ್ತವಾಗಿ ಹೇಳುತ್ತಿದ್ದರು. ಅವರೊಂದಿಗೆ ಕಳೆದ ಕ್ಷಣಗಳು ಸದಾ ನೆನಪಿನಲ್ಲಿ ಉಳಿಯುತ್ತವೆ” ಎಂದರು.
ನಟ ಹಾಗೂ ಸಂಸದ ಕಮಲ್ ಹಾಸನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಸೇರಿದಂತೆ ಹಲವು ಗಣ್ಯರು ಅವರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.