‘ಹರ್ ಘರ್ ತಿರಂಗ’ ಅಭಿಯಾನ; ತ್ರಿವರ್ಣ ಧ್ವಜದ ಬಣ್ಣದಲ್ಲಿ ಕಂಗೊಳಿಸಿದ ಮೆಟ್ರೋ ರೈಲು
ನವದೆಹಲಿ: ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ದೆಹಲಿ ಮೆಟ್ರೋ ಕೂಡ ಕೈಜೋಡಿಸಿದೆ. ಭಾನುವಾರ ತ್ರಿವರ್ಣ ಧ್ವಜದ ಥೀಮ್‌ನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಟ್ರೋ ರೈಲನ್ನು ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಬಿಡಲಾಯಿತು.
ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳ ಪ್ರಕಾರ, ವಾರಪೂರ್ತಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳ ಭಾಗವಾಗಿ ಈ ವಿಶೇಷ ರೈಲನ್ನು ಅನಾವರಣಗೊಳಿಸಲಾಗಿದೆ. ‘ವಂದೇ ಮಾತರಂ’ ಗೀತೆಯ 150ನೇ ವರ್ಷದ ಸ್ಮರಣೆಯೂ ಈ ಬಾರಿಯ ‘ಹರ್ ಘರ್ ತಿರಂಗ’ ಅಭಿಯಾನದ ವಿಶೇಷತೆಯಾಗಿದೆ. ನಾಗರಿಕರು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುವಂತೆ ಹಾಗೂ ಡಿಜಿಟಲ್ ಅಭಿಯಾನಗಳಲ್ಲಿ ಭಾಗವಹಿಸುವಂತೆ ಸಚಿವಾಲಯ ಮನವಿ ಮಾಡಿದೆ.

ಇದೇ ವೇಳೆ, ರೈಲು ಸಮಯಪಾಲನೆ ಮತ್ತು ವಿಶ್ವಾಸಾರ್ಹತೆಯಲ್ಲಿ ದೆಹಲಿ ಮೆಟ್ರೋ ಜಾಗತಿಕ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು DMRC ತಿಳಿಸಿದೆ. 59 ಸೆಕೆಂಡ್‌ಗಳಿಗಿಂತ ಹೆಚ್ಚು ತಡವಾದರೂ ಅದನ್ನು ವಿಳಂಬವೆಂದು ದಾಖಲಿಸುವ ಕಠಿಣ ಮಾನದಂಡವನ್ನು DMRC ಅನುಸರಿಸುತ್ತಿದೆ.
2003ರಲ್ಲಿ ಶೇ.98.27ರಷ್ಟಿದ್ದ ಸಮಯಪಾಲನೆ 2005ರಲ್ಲಿ ಶೇ.99.64ಕ್ಕೆ ಏರಿಕೆಯಾಗಿತ್ತು. 2026ರಲ್ಲಿ ಶೇ.99.95ರಷ್ಟು ಸಮಯಪಾಲನೆ ಕಾಯ್ದುಕೊಂಡಿರುವುದಾಗಿ DMRC ಹೇಳಿದೆ. COMETನ ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ, ವಿಶ್ವಾಸಾರ್ಹತೆಯಲ್ಲಿ ದೆಹಲಿ ಮೆಟ್ರೋ ಜಾಗತಿಕ ಅಗ್ರ ಐದು ವ್ಯವಸ್ಥೆಗಳಲ್ಲಿ ನಿರಂತರವಾಗಿ ಸ್ಥಾನ ಪಡೆದಿದೆ.
ಇದಲ್ಲದೆ, DMRC ಭಾರತದ ಅತಿದೊಡ್ಡ ಚಾಲಕರಹಿತ ಮೆಟ್ರೋ ಜಾಲವನ್ನು ನಿರ್ವಹಿಸುತ್ತಿದ್ದು, ಸುಮಾರು ಶೇ.29ರಷ್ಟು ಜಾಲವು ಚಾಲಕರಹಿತ ರೈಲು ಕಾರ್ಯಾಚರಣೆಯಲ್ಲಿದೆ. 71.55 ಕಿ.ಮೀ ಉದ್ದದ 45 ನಿಲ್ದಾಣಗಳ ಪಿಂಕ್ ಲೈನ್ ವಿಶ್ವದ ಅತಿ ಉದ್ದದ ಚಾಲಕರಹಿತ ಮೆಟ್ರೋ ಮಾರ್ಗವಾಗಿದೆ.
Delhi Metro Rail Corporation unveiled a special Metro train wrapped with the Har Ghar Tiranga theme on the Yellow Line to celebrate the spirit of independence. @OfficialDMRC said that the train was unveiled as part of the week-long activities being organised to celebrate the… pic.twitter.com/7TeUHmsX6n
— All India Radio News (@airnewsalerts) August 9, 2026