ಬೆಂಗಳೂರಿನಲ್ಲಿ ಅ. 20ರಿಂದ ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026
ಬೆಂಗಳೂರು: ನಗರದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 20ರಿಂದ 25ರವರೆಗೆ ನಡೆಯಲಿರುವ ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್‌ಬಾಲ್ ಲೀಗ್ ಏಷ್ಯಾ–2026’ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನ ಪೂರ್ವಸಿದ್ಧತೆಗಳನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೋಮವಾರ ಪರಿಶೀಲಿಸಿದರು.
ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಭಾರತೀಯ ಬಾಸ್ಕೆಟ್‌ಬಾಲ್ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಪಂದ್ಯಾವಳಿ ಆಯೋಜಿಸಲಾಗುತ್ತಿದೆ. ಏಷ್ಯಾದ ಆರು ಪ್ರಮುಖ ಮಹಿಳಾ ಬಾಸ್ಕೆಟ್‌ಬಾಲ್ ಕ್ಲಬ್ ತಂಡಗಳು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿವೆ.

ಪಂದ್ಯಾವಳಿಗೆ ಅಗತ್ಯವಿರುವ ಮೂಲಸೌಕರ್ಯ, ವ್ಯವಸ್ಥೆಗಳು ಹಾಗೂ ಇತರ ಸಿದ್ಧತೆಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನು ಸುಗಮವಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಫಿಬಾ ಏಷ್ಯಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್ ಸಂಸ್ಥೆಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು, ಸಂಸ್ಥೆಯ ಅಧ್ಯಕ್ಷ ಬಿ. ದಯಾನಂದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಹಾಗೂ ಆಯುಕ್ತ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.