ಉದ್ಯಾನವನ ಜಾಗ ಬಳಕೆ ಸಂಬಂಧ ಕಾನೂನು ಬದಲಾವಣೆಗೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ
ಬೆಂಗಳೂರು: ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರವಾಗಿ ವಿರೋಧಿಸಿದ್ದಾರೆ.
ಸಾಮಾಜಿಕ ಮಾಧ್ಯಮ ‘X’ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಅವರು, “ಹಸಿರು ಉದ್ಯಾನವನಗಳು ಮಾರಾಟಕ್ಕಿಲ್ಲ; ಅವು ನಮ್ಮ ಹಕ್ಕು” ಎಂದು ಹೇಳಿದ್ದಾರೆ. ಉದ್ಯಾನವನಗಳ ಜಾಗವನ್ನು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಬಲಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಉದ್ಯಾನವನಗಳ ಒಟ್ಟು ಪ್ರದೇಶದ ಶೇ.5ರಷ್ಟು ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ ಅಥವಾ ಅಡಮಾನ ಸೇರಿದಂತೆ ವಿವಿಧ ರೀತಿಯಲ್ಲಿ ಬಳಸಲು ಅವಕಾಶ ನೀಡುವ ಪ್ರಸ್ತಾವನೆ ಆತಂಕಕಾರಿ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
“ಇಂದು ಶೇ.5 ಎನ್ನುತ್ತಾರೆ, ನಾಳೆ ಶೇ.10? ನಂತರ ಸಂಪೂರ್ಣ ಉದ್ಯಾನವನವೇ?” ಎಂದು ಪ್ರಶ್ನಿಸಿರುವ ಅವರು, ಒಮ್ಮೆ ಉದ್ಯಾನವನದ ಜಾಗ ಕಾಂಕ್ರೀಟ್ ಪ್ರದೇಶವಾಗಿ ಪರಿವರ್ತನೆಯಾದರೆ ಅದನ್ನು ಮತ್ತೆ ಹಸಿರು ಪ್ರದೇಶವನ್ನಾಗಿ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.
‘ಪಕ್ಷಭೇದ ಮರೆತು ಸರ್ಕಾರದ ನಿರ್ಧಾರ ವಿರೋಧಿಸಿ’
ಬೆಂಗಳೂರಿನ ಗಾಳಿ, ನೀರು, ಪರಿಸರ ಹಾಗೂ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ಎಲ್ಲ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಸಚಿವರು ಪಕ್ಷಭೇದ ಮರೆತು ಸರ್ಕಾರದ ನಿರ್ಧಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.
“ಸರ್ಕಾರ ಮತ್ತು ಅಧಿಕಾರ ಬದಲಾಗಬಹುದು. ಆದರೆ ಒಮ್ಮೆ ಉದ್ಯಾನವನ ಹೋದರೆ ಅದನ್ನು ಮರಳಿ ತರುವುದು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಹಸಿರು ಉದ್ಯಾನವನಗಳು ಮಾರಾಟಕ್ಕಿಲ್ಲ, ಅವು ನಮ್ಮ ಹಕ್ಕು, ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗಲು ಬಿಡುವ ಪ್ರಶ್ನೆಯೇ ಇಲ್ಲ.
ರಾಜ್ಯ ಸರ್ಕಾರದ ವಕ್ರದೃಷ್ಟಿ ಉದ್ಯಾನವನಗಳ ಮೇಲೆ ಬಿದ್ದಿದೆ. ಬೆಂಗಳೂರಿನ ಭವಿಷ್ಯದ ಮೇಲೆ ಕಲ್ಲು ಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.
ರಾಜ್ಯ ಸರ್ಕಾರ ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರೆ ಉದ್ದೇಶಗಳಿಗೆ… pic.twitter.com/xXUcvNOvnL
— Tejasvi Surya (@Tejasvi_Surya) August 23, 2026
ಇದೇ ವೇಳೆ, ಕರ್ನಾಟಕದ ಅರಣ್ಯ, ಉದ್ಯಾನವನ ಮತ್ತು ಮಣ್ಣಿನ ಸಂರಕ್ಷಣೆಗೆ ದೀರ್ಘಕಾಲ ಸೇವೆ ಸಲ್ಲಿಸಿರುವ ನಿವೃತ್ತ ಅರಣ್ಯ ಇಲಾಖೆ ಕಾರ್ಯದರ್ಶಿ ಯಲ್ಲಪ್ಪ ರೆಡ್ಡಿ ಅವರ ವಿರೋಧದ ಧ್ವನಿಗೂ ಆಡಳಿತ ಗಮನ ನೀಡಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಕೆಂಪೇಗೌಡರಂತಹ ದೂರದೃಷ್ಟಿಯುಳ್ಳವರು ಕಟ್ಟಿದ ನಗರವನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ಜನಪ್ರತಿನಿಧಿಗಳು ಹಾಗೂ ನಾಗರಿಕರ ನೈತಿಕ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.
When Shri Yellappa Reddy sir, a 90 year old who has dedicated his entire life to protecting Karnataka’s forests, parks and soil, and who has served as Secretary of the Department of Forests, Ecology and Environment, speaks out, we must listen.
I sincerely hope the administration… pic.twitter.com/CPUmEXh4y6
— Tejasvi Surya (@Tejasvi_Surya) August 23, 2026