ಅನಂತಪುರ ಚೈನ್‌ಸಾ ದಾಳಿ ಪ್ರಕರಣ: ಎನ್ಕೌಂಟರ್ ಮಾಡಿ ಆರೋಪಿಯನ್ನು ಸೆರೆಹಿಡಿದ ಪೊಲೀಸ್
ಅನಂತಪುರ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾದುವಿನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಚೈನ್‌ಸಾದಿಂದ ದಾಳಿ ನಡೆಸಿದ ಆರೋಪಿ ಹೇಮಂತ್, ಭಾನುವಾರ ಆತ್ಮಕೂರು ಬಳಿ ಪೊಲೀಸರ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಖಚಿತ ಮಾಹಿತಿ ಮೇರೆಗೆ ಅರಣ್ಯ ಪ್ರದೇಶದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಬಂಧಿಸಲು ಮುಂದಾದಾಗ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲದೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಕೆಲ ಸಿಬ್ಬಂದಿ ಗಾಯಗೊಂಡಿದ್ದಾರೆ. ಆತನನ್ನು ನಿಯಂತ್ರಿಸಲು ಪೊಲೀಸರು ಆರು ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡ ಹೇಮಂತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಪ್ತಾದುವಿನ ಜಿಲ್ಲಾ ಪರಿಷತ್ ಪ್ರೌಢಶಾಲೆಗೆ ನುಗ್ಗಿದ್ದ ಆರೋಪಿ, ತರಗತಿಯಲ್ಲಿದ್ದ ವಿದ್ಯಾರ್ಥಿನಿಯ ಮೇಲೆ ಚೈನ್‌ಸಾದಿಂದ ದಾಳಿ ನಡೆಸಿದ್ದ. ಆಕೆಯನ್ನು ರಕ್ಷಿಸಲು ಯತ್ನಿಸಿದ ಮತ್ತೊಬ್ಬ ವಿದ್ಯಾರ್ಥಿಗೂ ಗಾಯಗಳಾಗಿದ್ದವು.
ವಿದ್ಯಾರ್ಥಿನಿಯ ಮುಖ, ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿರುವ ಆಕೆ ವೈದ್ಯಕೀಯ ನಿಗಾದಲ್ಲಿದ್ದಾಳೆ.
ಈ ಘಟನೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.