Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ

By ANU News
August 24, 2026 2 Min Read
0

ಬೆಂಗಳೂರು: ಕರ್ನಾಟಕದ ಅಪಾರ್ಟ್‌ಮೆಂಟ್‌ ಸಮುದಾಯಗಳ ಆಡಳಿತ ಹಾಗೂ ಮಾಲೀಕರ ಹಕ್ಕುಗಳ ರಕ್ಷಣೆಗೆ ಸಮಗ್ರ ಕಾನೂನು ಚೌಕಟ್ಟು ಒದಗಿಸುವ ಕರ್ನಾಟಕ ಅಪಾರ್ಟ್‌ಮೆಂಟ್‌ ಓನರ್‌ಶಿಪ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಆಕ್ಟ್‌ (KAOMA) 2026 ಜಾರಿಗೆ ಬಂದಿರುವುದನ್ನು ಬೆಂಗಳೂರು ಅಪಾರ್ಟ್‌ಮೆಂಟ್ಸ್‌ ಫೆಡರೇಷನ್‌ (BAF) ಸ್ವಾಗತಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲದ ಬಳಿಕ ಅಪಾರ್ಟ್‌ಮೆಂಟ್‌ ಮಾಲೀಕತ್ವಕ್ಕೆ ಸೀಮಿತವಾಗಿದ್ದ ಹಿಂದಿನ ಕಾನೂನು ವ್ಯವಸ್ಥೆಯಿಂದ ಹೊರಬಂದು, ಅಸೋಸಿಯೇಷನ್‌ ಆಡಳಿತ, ಪ್ರೊಮೋಟರ್‌ಗಳ ಹೊಣೆಗಾರಿಕೆ, ಕಾಮನ್‌ ಏರಿಯಾಗಳ ರಕ್ಷಣೆ, ಕಟ್ಟಡ ಸುರಕ್ಷತೆ, ನಿರ್ವಹಣೆ, ಪುನರ್‌ಅಭಿವೃದ್ಧಿ ಹಾಗೂ ವಿವಾದ ಪರಿಹಾರ ಸೇರಿದಂತೆ ಆಧುನಿಕ ಅಪಾರ್ಟ್‌ಮೆಂಟ್‌ ಸಮುದಾಯಗಳ ಅಗತ್ಯಗಳಿಗೆ ಅನುಗುಣವಾದ ಸಮಗ್ರ ವ್ಯವಸ್ಥೆಯತ್ತ ಕರ್ನಾಟಕ ಹೆಜ್ಜೆ ಇಟ್ಟಿದೆ ಎಂದು BAF ತಿಳಿಸಿದೆ.

ಕಾಯ್ದೆಯನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಅಂಗೀಕರಿಸುವ ನಿಟ್ಟಿನಲ್ಲಿ ಮುನ್ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ BAF ಕೃತಜ್ಞತೆ ಸಲ್ಲಿಸಿದೆ. ಅಪಾರ್ಟ್‌ಮೆಂಟ್‌ ಸಮುದಾಯಗಳ ದೀರ್ಘಕಾಲದ ಸಮಸ್ಯೆಗಳನ್ನು ಪರಿಗಣಿಸಿ ಮಸೂದೆಯನ್ನು ಎರಡೂ ಸದನಗಳಲ್ಲಿ ಮಂಡಿಸಿ ಮುಂದುವರಿಸಲು ಸಹಕರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಅಭಿನಂದನೆ ಸಲ್ಲಿಸಿದೆ.

 

ಅಪಾರ್ಟ್‌ಮೆಂಟ್‌ ಆಡಳಿತದಲ್ಲಿ ಮಹತ್ವದ ಸುಧಾರಣೆ

BAF ಅಧ್ಯಕ್ಷ ಸತೀಶ್ ಮಲ್ಯ ಮಾತನಾಡಿ, KAOMA 2026, 1972ರ ಕಾನೂನು ಚೌಕಟ್ಟಿಗೆ ಹೋಲಿಸಿದರೆ ಮಹತ್ವದ ಸುಧಾರಣೆಯಾಗಿದೆ. ದೇಶದ ಬಲಿಷ್ಠ ಅಪಾರ್ಟ್‌ಮೆಂಟ್‌ ಆಡಳಿತ ಕಾನೂನುಗಳಲ್ಲಿ ಒಂದಾಗುವ ಸಾಮರ್ಥ್ಯ ಇದಕ್ಕಿದೆ. ಕಾನೂನಿನ ಪರಿಣಾಮಕಾರಿ ಅನುಷ್ಠಾನವೇ ಮುಂದಿನ ಪ್ರಮುಖ ಹಂತವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ BAF ರಚನಾತ್ಮಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಅಪಾರ್ಟ್‌ಮೆಂಟ್‌ ಮಾಲೀಕರ ಹಕ್ಕುಗಳ ರಕ್ಷಣೆ, ಅಸೋಸಿಯೇಷನ್‌ಗಳ ಸಬಲೀಕರಣ, ಪ್ರೊಮೋಟರ್‌ಗಳ ಹೊಣೆಗಾರಿಕೆ, ಕಾಮನ್‌ ಏರಿಯಾಗಳ ರಕ್ಷಣೆ, ಕಟ್ಟಡ ಸುರಕ್ಷತೆ ಹಾಗೂ ಪುನರ್‌ಅಭಿವೃದ್ಧಿಗೆ ಸ್ಪಷ್ಟ ವ್ಯವಸ್ಥೆ ಕಲ್ಪಿಸುವುದು ಕಾಯ್ದೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ಹೇಳಿದರು.

BAF ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್ ಮಾತನಾಡಿ, ಅಪಾರ್ಟ್‌ಮೆಂಟ್‌ಗಳ ನಿರ್ವಹಣೆ ಮತ್ತು ಆಡಳಿತವನ್ನು ಅಸೋಸಿಯೇಷನ್‌ಗೆ ಹಸ್ತಾಂತರಿಸಲು KAOMA ಬಲಿಷ್ಠ ವ್ಯವಸ್ಥೆ ಒದಗಿಸುತ್ತದೆ. ಆದರೆ ನಿರ್ವಹಣೆಯ ಜತೆಗೆ ಮಾಲೀಕತ್ವದ ಹಕ್ಕುಗಳೂ ಸ್ಪಷ್ಟವಾಗಿ ಹಸ್ತಾಂತರವಾಗಬೇಕು. ಭೂಮಿ ಹಾಗೂ ಕಾಮನ್‌ ಏರಿಯಾ ಹಕ್ಕುಗಳ ಕಾನೂನುಬದ್ಧ ಮತ್ತು ಡೀಮ್ಡ್ ಕನ್ವೆಯನ್ಸ್‌ಗೆ ಕಾಲಮಿತಿಯ, ಸ್ಪಷ್ಟ ಹಾಗೂ ಜಾರಿಗೊಳಿಸಬಹುದಾದ ವ್ಯವಸ್ಥೆ ಅಗತ್ಯ ಎಂದು ಹೇಳಿದರು.

BAF ಜಿಸಿ ಸದಸ್ಯೆ ಹಾಗೂ ಪಾಲಿಸಿ ವಿಭಾಗದ ಮುಖ್ಯಸ್ಥೆ ಸಿಎ ಸುಜಾತಾ ಜಿ. ಮಾತನಾಡಿ, ಪ್ರತಿ ಅಪಾರ್ಟ್‌ಮೆಂಟ್‌ ಯೋಜನೆಗೆ ಒಂದು ಕಾನೂನುಬದ್ಧ ಅಸೋಸಿಯೇಷನ್‌ ಎಂಬ ಪರಿಕಲ್ಪನೆ ಆಡಳಿತವನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲಿದೆ. ನೋಂದಾಯಿತ ಅಸೋಸಿಯೇಷನ್‌ಗೆ ಬಾಡಿ ಕಾರ್ಪೊರೇಟ್‌ ಸ್ಥಾನಮಾನ ಹಾಗೂ ತನ್ನದೇ ಹೆಸರಿನಲ್ಲಿ ದಾವೆ ಹೂಡುವ ಮತ್ತು ಎದುರಿಸುವ ಕಾನೂನು ಸಾಮರ್ಥ್ಯ ನೀಡಿರುವುದು ಮಹತ್ವದ ಹೆಜ್ಜೆ ಎಂದರು.

BAF ಜಿಸಿ ಸದಸ್ಯ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವ ವೆಂಕಟ ರೆಡ್ಡಿ ಮಾತನಾಡಿ, ಈಗಾಗಲೇ ಅಸ್ತಿತ್ವದಲ್ಲಿರುವ ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಪರಿವರ್ತನಾ ಅವಕಾಶ ನೀಡಿರುವುದು ಮಹತ್ವದ ಬೆಳವಣಿಗೆ. KAOA 1972 ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ರಚನೆಯಾಗಿರುವ ಅಸೋಸಿಯೇಷನ್‌ಗಳು ನಿಗದಿತ ಪ್ರಕ್ರಿಯೆಯಂತೆ ಹೊಸ ಕಾನೂನು ಚೌಕಟ್ಟಿಗೆ ಪರಿವರ್ತನೆಯಾಗಲು ಸಾಧ್ಯವಾಗಲಿದೆ. ಇದರಿಂದ ಸಾವಿರಾರು ಸಮುದಾಯಗಳಿಗೆ ನಿರಂತರತೆ ದೊರೆಯಲಿದೆ ಎಂದರು.

ಮಾಲೀಕರಿಗೆ ಪ್ರಮುಖ ಐದು ಪ್ರಯೋಜನಗಳು:

  1. ಪ್ರೊಮೋಟರ್‌ಗಳ ಹೊಣೆಗಾರಿಕೆ ಮುಂದುವರಿಕೆ:
    ಅಸೋಸಿಯೇಷನ್‌ಗೆ ನಿರ್ವಹಣೆ ಹಸ್ತಾಂತರವಾದ ಬಳಿಕವೂ RERA ಅಡಿಯಲ್ಲಿ ಪ್ರೊಮೋಟರ್‌ಗಳ ಹೊಣೆಗಾರಿಕೆ ಮುಂದುವರಿಯಲಿದೆ. ಕಾಮನ್‌ ಏರಿಯಾಗಳ ಮೇಲೆ ಪ್ರೊಮೋಟರ್‌ಗಳ ನಿಯಂತ್ರಣ ಮುಂದುವರಿಸಲು ಅವಕಾಶವಿರುವುದಿಲ್ಲ.
  2. ಅಸೋಸಿಯೇಷನ್‌ ರಚನೆಗೆ ಕಾಲಮಿತಿ:
    ಬಹುಪಾಲು ಅಪಾರ್ಟ್‌ಮೆಂಟ್‌ಗಳು ಹಂಚಿಕೆಯಾದ ಬಳಿಕ ಮೂರು ತಿಂಗಳೊಳಗೆ ಅಸೋಸಿಯೇಷನ್‌ ರಚನೆ ಮತ್ತು ನೋಂದಣಿಗೆ ಪ್ರೊಮೋಟರ್‌ ನೆರವು ನೀಡಬೇಕು. ವಿಫಲವಾದರೆ ಸಂಬಂಧಿತ ಪ್ರಾಧಿಕಾರ ಮಧ್ಯಪ್ರವೇಶಿಸಬಹುದಾಗಿದೆ.
  3. ಕಾಮನ್‌ ಏರಿಯಾಗಳಿಗೆ ರಕ್ಷಣೆ:
    ಕಾಮನ್‌ ಏರಿಯಾಗಳನ್ನು ಖಾಸಗಿ ಅಥವಾ ಮಾರಾಟ ಮಾಡಬಹುದಾದ ಪ್ರದೇಶಗಳಾಗಿ ಪರಿವರ್ತಿಸುವುದನ್ನು ತಡೆಯಲು ಹೆಚ್ಚಿನ ಕಾನೂನು ರಕ್ಷಣೆ ದೊರೆಯಲಿದೆ.
  4. ಭವಿಷ್ಯದ ಅಭಿವೃದ್ಧಿ ಹಕ್ಕು ಮಾಲೀಕರಿಗೆ:
    ಯೋಜನಾ ನಿಯಮಗಳ ಬದಲಾವಣೆಯಿಂದ ಭವಿಷ್ಯದಲ್ಲಿ ದೊರೆಯಬಹುದಾದ ಹೆಚ್ಚುವರಿ FSI/FAR ಸೇರಿದಂತೆ ಅಭಿವೃದ್ಧಿ ಸಾಮರ್ಥ್ಯವನ್ನು ಅಪಾರ್ಟ್‌ಮೆಂಟ್‌ ಮಾಲೀಕರ ಸಾಮೂಹಿಕ ಹಕ್ಕಾಗಿ ಪರಿಗಣಿಸುವ ಮಹತ್ವದ ತತ್ವವನ್ನು ಕಾಯ್ದೆ ಒಳಗೊಂಡಿದೆ.
  5. ಕಟ್ಟಡ ಸುರಕ್ಷತೆ ಮತ್ತು ಪುನರ್‌ಅಭಿವೃದ್ಧಿಗೆ ಚೌಕಟ್ಟು: ಹಳೆಯ ಕಟ್ಟಡಗಳ ರಚನಾತ್ಮಕ ಸ್ಥಿರತೆ ಪರಿಶೀಲನೆ, ಪ್ರಮುಖ ದುರಸ್ತಿ, ಪುನರ್‌ನಿರ್ಮಾಣ ಹಾಗೂ ಪುನರ್‌ಅಭಿವೃದ್ಧಿಗೆ ವ್ಯವಸ್ಥಿತ ಕಾನೂನು ಚೌಕಟ್ಟು ಒದಗಿಸಲಾಗುತ್ತದೆ.

KAOMA 2026ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಕರ್ನಾಟಕದ ಅಪಾರ್ಟ್‌ಮೆಂಟ್‌ ಸಮುದಾಯಗಳಲ್ಲಿ ಪಾರದರ್ಶಕ, ಜವಾಬ್ದಾರಿಯುತ ಹಾಗೂ ಸುಸ್ಥಿರ ಆಡಳಿತ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಸರ್ಕಾರ, ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗಳು, ಪ್ರೊಮೋಟರ್‌ಗಳು ಹಾಗೂ ಇತರ ಪಾಲುದಾರರೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುವುದಾಗಿ BAF ತಿಳಿಸಿದೆ.

Author

ANU News

Follow Me
Other Articles
Previous

H1N1 cases among children see slight uptick in Bengaluru, says Karnataka health minister

Next

New legal framework for Karnataka apartment communities: BAF hails KAOMA 2026 as ‘new beginning’ for stronger governance

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • New legal framework for Karnataka apartment communities: BAF hails KAOMA 2026 as ‘new beginning’ for stronger governance
    • ಅಪಾರ್ಟ್‌ಮೆಂಟ್‌ ಸಮುದಾಯಗಳಿಗೆ ಹೊಸ ಕಾನೂನು ಚೌಕಟ್ಟು: BAF ಸ್ವಾಗತ
    • H1N1 cases among children see slight uptick in Bengaluru, says Karnataka health minister
    • ಮಕ್ಕಳಲ್ಲಿ H1N1 ಪ್ರಕರಣಗಳ ಏರಿಕೆ: ಆತಂಕ ಬೇಡ, ಮುನ್ನೆಚ್ಚರಿಕೆ ಅಗತ್ಯ, ಶಾಲೆಗಳಿಗೆ ಸಚಿವರ ಸೂಚನೆ
    • ಅದಾನಿ, ನಾಗೇಂದ್ರ, ಲಾಲ್‌ಬಾಗ್ ಭೂಮಿ: ವಿಧಾನಸಭೆಯಲ್ಲಿ ಬಿಜೆಪಿ-ಜೆಡಿಎಸ್ ಭಾರಿ ಪ್ರತಿಭಟನೆ
    Copyright 2026 — ANU News. All rights reserved. Blogsy WordPress Theme