Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ

By ANU News
October 16, 2026 2 Min Read
0

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆಯ ದಂತ ನಾಪತ್ತೆಯಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ, ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶದ ಆಳವಾದ ಅರಣ್ಯ ಭಾಗದಲ್ಲೇ ಇಂತಹ ಘಟನೆಗಳು ನಡೆದಿರುವುದು ಅರಣ್ಯ ಇಲಾಖೆಯ ಗಸ್ತು ವ್ಯವಸ್ಥೆ, ಮೇಲ್ವಿಚಾರಣೆ ಮತ್ತು ವನ್ಯಜೀವಿಗಳ ರಕ್ಷಣಾ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳ್ಳಬೇಟೆಗಾರರು ಅರಣ್ಯ ಪ್ರವೇಶಿಸಲು ಹೇಗೆ ಸಾಧ್ಯವಾಯಿತು, ಸಂಬಂಧಪಟ್ಟ ಅಧಿಕಾರಿಗಳು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಹಾಗೂ ಭದ್ರತಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ ಎಂಬುದನ್ನು ಪರಿಶೀಲಿಸುವಂತೆ ಸಚಿವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

ಹುಲಿ ಉರುಳಿಗೆ ಸಿಲುಕಿ ಮೃತಪಟ್ಟಿರುವುದರ ಹಿಂದಿನ ಕಾರಣ, ಉರುಳನ್ನು ಅಳವಡಿಸಿದವರು ಯಾರು, ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾಗಿವೆ ಮತ್ತು ಎರಡೂ ಪ್ರಕರಣಗಳಲ್ಲಿ ಕಳ್ಳಬೇಟೆಗಾರರ ಕೈವಾಡವಿದೆಯೇ ಎಂಬುದರ ಕುರಿತು ಸಾಕ್ಷ್ಯಾಧಾರಿತ ತನಿಖೆ ನಡೆಸಬೇಕು. ಘಟನೆಗಳ ನಡುವೆ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸಬೇಕು ಎಂದು ಸಚಿವರು ಬರೆದಿರುವ ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.

ಘಟನಾ ಸ್ಥಳಗಳಲ್ಲಿನ ಭೌತಿಕ ಸಾಕ್ಷ್ಯಗಳು, ಛಾಯಾಚಿತ್ರಗಳು, ಸಿಬ್ಬಂದಿಯ ಹೇಳಿಕೆಗಳು, ಗಸ್ತು ಪುಸ್ತಕಗಳು, ಮರಣೋತ್ತರ ಪರೀಕ್ಷೆ ಹಾಗೂ ಪ್ರಯೋಗಾಲಯ ವರದಿಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಸಾಕ್ಷ್ಯಗಳು ನಾಶವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಧಿಕಾರಿಗಳ ಕರ್ತವ್ಯಲೋಪದ ಪರಿಶೀಲನೆ

ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಬೀಟ್ ಸಿಬ್ಬಂದಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು. ಕೊನೆಯ ಬಾರಿ ಗಸ್ತು ನಡೆಸಿದ ದಿನಾಂಕ ಮತ್ತು ಸಮಯ, ಸಿಬ್ಬಂದಿ ನಿಯೋಜನೆ, ಅರಣ್ಯ ಪ್ರವೇಶದ ಮೇಲ್ವಿಚಾರಣೆ ಹಾಗೂ ಹಿಂದಿನ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ಲಭ್ಯವಿತ್ತೇ ಎಂಬುದನ್ನು ಪರಿಶೀಲಿಸಬೇಕು.

ಕರ್ತವ್ಯಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ಜವಾಬ್ದಾರಿ ನಿಗದಿಪಡಿಸಿ, ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.

ರಾಜ್ಯದ ಎಲ್ಲ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಡಿಸಿಎಫ್) ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು (ಎಸಿಎಫ್) ತಮ್ಮ ವ್ಯಾಪ್ತಿಯ ಅರಣ್ಯ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಗಸ್ತು ವ್ಯವಸ್ಥೆ, ಸಿಬ್ಬಂದಿಯ ಕಾರ್ಯನಿರ್ವಹಣೆ ಮತ್ತು ವನ್ಯಜೀವಿಗಳ ಸುರಕ್ಷತೆಯನ್ನು ಪರಿಶೀಲಿಸಬೇಕು.

ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಗಸ್ತು ಬಲಪಡಿಸುವುದು, ಸಿಬ್ಬಂದಿಯನ್ನು ಸೂಕ್ತವಾಗಿ ನಿಯೋಜಿಸುವುದು, ನಿರಂತರ ನಿಗಾ ವಹಿಸುವುದು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಕ್ಷೇತ್ರ ಪರಿಶೀಲನೆಯ ವಿವರಗಳು ಮತ್ತು ಕೈಗೊಂಡ ಕ್ರಮಗಳ ದಾಖಲೆಗಳನ್ನು ನಿರ್ವಹಿಸಬೇಕು.

ಒಂದು ವಾರದೊಳಗೆ ವರದಿ

ತನಿಖೆಯ ಪ್ರಗತಿ, ಘಟನೆಗಳ ಸಂಭವನೀಯ ಕಾರಣಗಳು, ಸಂಗ್ರಹಿಸಿದ ಸಾಕ್ಷ್ಯಗಳು, ಕಳ್ಳಬೇಟೆಯ ಸಾಧ್ಯತೆ, ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಹಾಗೂ ಕೈಗೊಂಡ ಮತ್ತು ಪ್ರಸ್ತಾಪಿತ ಕ್ರಮಗಳ ಕುರಿತು ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಬೇಕು. ರಾಜ್ಯದ ಎಲ್ಲ ಡಿಸಿಎಫ್ ಮತ್ತು ಎಸಿಎಫ್‌ಗಳು ತಮ್ಮ ವ್ಯಾಪ್ತಿಯಲ್ಲಿ ನಡೆಸಿದ ಕ್ಷೇತ್ರ ಪರಿಶೀಲನೆ ಹಾಗೂ ಅರಣ್ಯ ಭದ್ರತೆ ಬಲಪಡಿಸಲು ಕೈಗೊಂಡ ಕ್ರಮಗಳ ವಿವರಗಳನ್ನೂ ವರದಿಯಲ್ಲಿ ಸೇರಿಸಬೇಕು ಎಂದು ಸೂಚಿಸಲಾಗಿದೆ.

ವನ್ಯಜೀವಿಗಳ ರಕ್ಷಣೆ ಮತ್ತು ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಗಸ್ತು ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸುವ ಅಗತ್ಯವನ್ನು ನಿರ್ದೇಶನದಲ್ಲಿ ಒತ್ತಿಹೇಳಲಾಗಿದೆ.

Author

ANU News

Follow Me
Other Articles
Previous

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್

Next

Bandipur wildlife incidents: Ramalinga Reddy orders probe into poaching, security lapses

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ
    • Trump Seeks Death Penalty for Those Who Kill Firefighters on Duty
    • Four Killed, Over 20 Injured in Bus-Lorry Collision Near Piriyapatna, Mysuru
    • ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು
    • Bandipur wildlife incidents: Ramalinga Reddy orders probe into poaching, security lapses
    Copyright 2026 — ANU News. All rights reserved. Blogsy WordPress Theme