Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ: ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತರಲು ಮನಸ್ಸು ಸಿದ್ಧಗೊಳಿಸಬೇಕು: ಎಚ್.ಕೆ. ಪಾಟೀಲ್

By ANU News
October 16, 2026 2 Min Read
0

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಐದನೇ ದಿನದ ಕಾರ್ಯಕ್ರಮ ಗಮನಸೆಳೆಯಿತು. ಅಧ್ಹೂರಿ ವೈಭವದ ಕೈಂಕರ್ಯದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಭಾಗಿಯಾಗಿದ್ದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಸಾಮಾಜಿಕ ಸ್ಥಿತಿ, ಪ್ರಸಕ್ತ ಸನ್ನಿವೇಶಗಲ್ಲಿ ಬದುಕು ಹೇಗಿರಬೇಕು ಎಂಬ ಬಗ್ಗೆ ಮಾತನಾಡಿದರು.
ಮೊಬೈಲ್ ವ್ಯಸನದಿಂದ ಮಕ್ಕಳನ್ನು ಹೊರತಂದು, ಶಿಸ್ತು, ನೆಮ್ಮದಿ ಮತ್ತು ಶಾಂತಿಯುತ ಜೀವನಕ್ಕೆ ಅವರನ್ನು ಸಜ್ಜುಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಇಂದಿನ ವಿದ್ಯಾರ್ಥಿಗಳು ಅರ್ಧ ಗಂಟೆಯೂ ಮೊಬೈಲ್ ಇಲ್ಲದೆ ಇರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸತ್ಯ ಸಾಯಿ ಶಾಲೆಗಳಲ್ಲಿ ಮಕ್ಕಳಿಗೆ ಮೊಬೈಲ್ ಅವಲಂಬನೆಯಿಲ್ಲದೆ ಬದುಕುವ ಜತೆಗೆ ನೆಮ್ಮದಿ ಮತ್ತು ಶಾಂತಿಯಿಂದ ಜೀವನ ನಡೆಸುವ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಗ್ರಾಮೀಣ ಪ್ರದೇಶವಾದ ಮುದ್ದೇನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಿಸುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಂಕಲ್ಪದ ಬಗ್ಗೆ ಆರಂಭದಲ್ಲಿ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲೇ ಸಾಕಷ್ಟು ಆಸ್ಪತ್ರೆಗಳಿರುವಾಗ ಮುದ್ದೇನಹಳ್ಳಿಗೆ ಯಾರು ಬರುತ್ತಾರೆ, ವೈದ್ಯರು ಹೇಗೆ ಲಭ್ಯವಾಗುತ್ತಾರೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಆದರೆ, ಎಲ್ಲ ಸವಾಲುಗಳನ್ನು ಮೀರಿ ಸದ್ಗುರುಗಳು ತಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನ, ಅಕ್ಷರ ಮತ್ತು ಆರೋಗ್ಯವನ್ನು ಉಚಿತವಾಗಿ ಒದಗಿಸುತ್ತಿರುವ ಸದ್ಗುರುಗಳು, ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಉಚಿತ ವಸತಿ ಶಾಲೆ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಈ ಗುರಿ ಸಾಕಾರಗೊಳ್ಳಲು ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಜಗನ್ಮಾತೆಯನ್ನು ಆರಾಧಿಸುವುದಷ್ಟೇ ಸಾಕಾಗುವುದಿಲ್ಲ; ಆಕೆಯ ಎಲ್ಲ ಮಕ್ಕಳನ್ನೂ ಸಮಾನವಾಗಿ ಕಾಣಬೇಕು. ಅವರ ಕಷ್ಟಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸಿದಾಗ ಮಾತ್ರ ಜಗನ್ಮಾತೆಯ ಆರಾಧನೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

ತಾಯಿ ಕ್ಷಮೆ, ದಯೆ ಮತ್ತು ಕರುಣೆಯ ಪ್ರತಿರೂಪ. ಎಲ್ಲ ಸದ್ಗುಣಗಳನ್ನೂ ಹೊಂದಿರುವ ತಾಯಿಯ ಸ್ಥಾನಕ್ಕೆ ಸರಿಸಾಟಿಯಿಲ್ಲ ಎಂದರು. ಶಂಕರಾಚಾರ್ಯರು ಸನ್ಯಾಸ ಧರ್ಮದ ನಿಯಮಗಳನ್ನು ಮೀರಿ ತಮ್ಮ ತಾಯಿ ಆರ್ಯಾಂಭ ಅವರ ಅಂತ್ಯಕ್ರಿಯೆ ನೆರವೇರಿಸಿದ ಘಟನೆಯನ್ನು ಉಲ್ಲೇಖಿಸಿದ ಅವರು, ಸಂಪ್ರದಾಯವಾದಿಗಳ ವಿರೋಧದ ನಡುವೆಯೂ ತಾಯಿಯ ಕರ್ತವ್ಯಕ್ಕೆ ಆದ್ಯತೆ ನೀಡಿದ ಈ ಘಟನೆ ಮಾತೃಪ್ರೇಮದ ಮಹತ್ವವನ್ನು ಸಾರುತ್ತದೆ ಎಂದು ವಿವರಿಸಿದರು.

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಸಾಮಾಜಿಕ ಸೇವೆಯ ಹಿಂದೆಯೂ ಅವರ ತಾಯಿ ಈಶ್ವರಮ್ಮ ಅವರ ಪ್ರೇರಣೆ ಇತ್ತು. ಜನರ ಸಂಕಷ್ಟಗಳನ್ನು ಕಂಡು ಅವರಿಗೆ ನೆರವಾಗುವಂತೆ ಈಶ್ವರಮ್ಮ ಅವರು ಬಾಬಾ ಅವರಿಗೆ ಸೂಚಿಸಿದ್ದರು. ತಾಯಿಯ ಕಾಳಜಿಯೇ ಸೇವಾ ಕಾರ್ಯಗಳಿಗೆ ಪ್ರೇರಣೆಯಾಯಿತು ಎಂದು ಹೇಳಿದರು.

ತಾಯಿಯ ಪ್ರೀತಿ ಮತ್ತು ಕರುಣೆ ವ್ಯಕ್ತಿಯ ಬೆಳವಣಿಗೆಗೆ ಭದ್ರ ಬುನಾದಿ. ಇತರರ ನೋವಿಗೆ ಸ್ಪಂದಿಸಿ, ಕರುಣೆಯಿಂದ ಬದುಕುವುದೇ ತಾಯಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅಭಿಪ್ರಾಯಪಟ್ಟರು.

ಶಂಕರಾಚಾರ್ಯರ ಆಶಯದಂತೆ ಸೇವೆ

ಶಂಕರಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ವಿದ್ಯಾದಾನ ಮತ್ತು ಔಷಧದಾನದ ಮಹತ್ವವನ್ನು ಪ್ರತಿಪಾದಿಸಿದ್ದರು. ನಮ್ಮ ಸಂಸ್ಥೆ ಉಚಿತ ಶಿಕ್ಷಣ ಮತ್ತು ವೈದ್ಯಕೀಯ ಸೇವೆಯ ಮೂಲಕ ಅವರ ಆಶಯವನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದು ಸದ್ಗುರು ಮಧುಸೂದನ ಸಾಯಿ ತಿಳಿಸಿದರು.

ಶೃಂಗೇರಿಯ ಋತ್ವಿಜ ವಿದ್ವಾನ್ ಸುಬ್ರಹ್ಮಣ್ಯ ಭಟ್ ಮಾತನಾಡಿ, ನವರಾತ್ರಿಯ ಐದನೇ ದಿನ ಆರಾಧಿಸಲಾಗುವ ಸ್ಕಂದಮಾತೆಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಲಲಿತಾ ಹೋಮ, ಶ್ರೀ ಚಕ್ರ ಪೂಜೆ, ಸುಮಂಗಲಿ ಪೂಜೆ ಮತ್ತು ಕನ್ನಿಕಾ ಪೂಜೆ ನೆರವೇರಿದವು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Karnataka to Challenge High Court Verdict on SC/ST Reservation in Supreme Court

Next

ಬಂಡೀಪುರದಲ್ಲಿ ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ವಾರದೊಳಗೆ ಸಮಗ್ರ ವರದಿಗೆ ಸೂಚನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಕರ್ತವ್ಯದಲ್ಲಿರುವ ಅಗ್ನಿಶಾಮಕ ಸಿಬ್ಬಂದಿ ಹತ್ಯೆಗೆ ಮರಣದಂಡನೆ: ಅಮೆರಿಕ ಪ್ರಸ್ತಾಪ
    • Trump Seeks Death Penalty for Those Who Kill Firefighters on Duty
    • Four Killed, Over 20 Injured in Bus-Lorry Collision Near Piriyapatna, Mysuru
    • ಪಿರಿಯಾಪಟ್ಟಣ ಬಳಿ ಬಸ್–ಲಾರಿ ಮುಖಾಮುಖಿ ಡಿಕ್ಕಿ: ನಾಲ್ವರು ಸಾವು
    • Bandipur wildlife incidents: Ramalinga Reddy orders probe into poaching, security lapses
    Copyright 2026 — ANU News. All rights reserved. Blogsy WordPress Theme