CWMA ಸಭೆ ಬಳಿಕ ನಾಲೆಗಳಿಗೆ ನೀರು ಬಿಡುವ ಕುರಿತು ತೀರ್ಮಾನ: ಚಲುವರಾಯಸ್ವಾಮಿ
ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಬೆಳೆದಿರುವ ಕಬ್ಬು ಬೆಳೆ ಹಾಗೂ ಕೆರೆ-ಕಟ್ಟೆಗಳಿಗೆ ನೀರು ಬಿಡುವ ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯ ಬಳಿಕ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರೈತರ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸಂಕಷ್ಟದ ಸಮಯದಲ್ಲಿ ರೈತರ ಪರವಾಗಿ ನಿಲ್ಲುವುದು ಸರ್ಕಾರದ ಆದ್ಯತೆ. ಆದರೆ ಈ ವರ್ಷ ನಿರೀಕ್ಷಿತ ಮಳೆಯಾಗದ ಕಾರಣ ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದು, ಕುಡಿಯುವ ನೀರಿನ ಅಗತ್ಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದು, ದೆಹಲಿಯಲ್ಲಿ ನಡೆಯಲಿರುವ CWMA ಹಾಗೂ CWRC ಸಭೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದರು.
ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಕುಡಿಯುವ ನೀರಿನ ಅಗತ್ಯ, ಬೆಳೆಗಳ ಸ್ಥಿತಿ ಹಾಗೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮಂಡಿಸಲಿದ್ದಾರೆ. ಸಭೆಯ ಬಳಿಕ ತಕ್ಷಣವೇ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ನಾಲೆಗಳಿಗೆ ನೀರು ಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ವ್ಯಕ್ತಪಡಿಸಿರುವುದರಿಂದ ಕೆಆರ್ಎಸ್ ಜಲಾಶಯ ತುಂಬುವ ನಿರೀಕ್ಷೆಯಿದೆ. ರೈತರು ಧೃತಿಗೆಡದೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, “ಇದು ರೈತರ ಬದುಕಿನ ಪ್ರಶ್ನೆ. ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು” ಎಂದು ಎಲ್ಲಾ ಪಕ್ಷಗಳ ನಾಯಕರಿಗೆ ಮನವಿ ಮಾಡಿದ್ದಾರೆ.