ಸೈದ್ಧಾಂತಿಕ ರಾಜಕಾರಣದಿಂದಷ್ಟೇ ಪ್ರಜಾಪ್ರಭುತ್ವದ ಉಳಿವು: ಬಿ.ಕೆ. ಹರಿಪ್ರಸಾದ್
ಮಂಗಳೂರು: ಸೈದ್ಧಾಂತಿಕ ರಾಜಕಾರಣವನ್ನು ಬದಿಗಿಟ್ಟು ಅಧಿಕಾರದ ರಾಜಕಾರಣಕ್ಕೆ ಸೀಮಿತವಾದರೆ ಪ್ರಜಾಪ್ರಭುತ್ವದ ಅಸ್ತಿತ್ವವೇ ಅಪಾಯಕ್ಕೆ ಸಿಲುಕಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಚ್ಚರಿಸಿದರು.
ಮಂಗಳೂರಿನ ಕೆಟಿಸಿ ಕ್ಯಾಂಪಸ್‌ನಲ್ಲಿ ನಡೆದ ‘ಜನನುಡಿ’ ಕಾರ್ಯಕ್ರಮದ ‘ಪ್ರಜಾಪ್ರಭುತ್ವದ ಅಳಿವು-ಉಳಿವು: ಸಿದ್ಧಾಂತಗಳ ಪಾತ್ರ’ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವವೆಂದರೆ ಚುನಾವಣೆ ಮತ್ತು ಸರ್ಕಾರ ರಚನೆ ಮಾತ್ರವಲ್ಲ; ಪ್ರತಿಯೊಬ್ಬರ ಘನತೆ, ಸ್ವಾತಂತ್ರ್ಯ ಹಾಗೂ ಸಮಾನತೆಯನ್ನು ಗೌರವಿಸುವ ವ್ಯವಸ್ಥೆ ಎಂದರು.
ಮೂಲಭೂತವಾದ, ಕೋಮುವಾದ, ಬಹುಸಂಖ್ಯಾವಾದ, ಅತಿರೇಕದ ರಾಷ್ಟ್ರೀಯತೆ ಮತ್ತು ಅಧಿಕಾರದ ಕೇಂದ್ರೀಕರಣ ಪ್ರಜಾಪ್ರಭುತ್ವಕ್ಕೆ ಪ್ರಮುಖ ಸವಾಲುಗಳಾಗಿವೆ. ಸರ್ಕಾರವನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧ. ಚುನಾವಣಾ ಆಯೋಗ, ನ್ಯಾಯಾಂಗ, ಸಂಸತ್ತು ಮತ್ತು ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಾಪಾಡುವುದು ಅತ್ಯಗತ್ಯ ಎಂದು ಹೇಳಿದರು.

ಜಾತಿ ವ್ಯವಸ್ಥೆ ಸಾಮಾಜಿಕ ವಿಭಜನೆಯಷ್ಟೇ ಅಲ್ಲ, ಆರ್ಥಿಕ ಅವಕಾಶಗಳನ್ನೂ ನಿರ್ಧರಿಸುತ್ತದೆ. ಶಿಕ್ಷಣ, ಉದ್ಯೋಗ ಮತ್ತು ಸಂಪತ್ತಿನಿಂದ ಸಮುದಾಯಗಳನ್ನು ದೂರವಿಟ್ಟಿರುವ ಈ ವ್ಯವಸ್ಥೆ ನಿರ್ಮೂಲನೆಯಾಗದೆ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ರಾಜಕೀಯ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವೂ ಅಗತ್ಯ ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.
ದೇಶದ ಅಭಿವೃದ್ಧಿಯನ್ನು ಆರ್ಥಿಕ ಬೆಳವಣಿಗೆಯಿಂದ ಮಾತ್ರ ಅಳೆಯದೆ ಹಸಿವು, ನಿರುದ್ಯೋಗ, ಬಡತನ, ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಯನ್ನೂ ಪರಿಗಣಿಸಬೇಕು. ಕೆಲವೇ ಉದ್ಯಮಿಗಳ ಕೈಯಲ್ಲಿ ಸಂಪತ್ತು ಕೇಂದ್ರೀಕರಣವಾಗುತ್ತಿರುವುದು ಆರ್ಥಿಕ ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಟೀಕಿಸಿದರು.
ಕ್ಷೇತ್ರ ಪುನರ್ವಿಂಗಡಣೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಬಾರದು. ಮಹಿಳಾ ಮೀಸಲಾತಿಯಲ್ಲಿ ದಲಿತ, ಆದಿವಾಸಿ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೂ ನ್ಯಾಯಯುತ ಪ್ರಾತಿನಿಧ್ಯ ಸಿಗಬೇಕು ಎಂದರು.
ಚುನಾವಣೆಯಲ್ಲಿ ಹಣದ ಪ್ರಭಾವ ತೊಡೆದುಹಾಕಿ ‘ವೋಟ್’ ಮತ್ತು ‘ನೋಟ್’ ನಡುವಿನ ಸಂಬಂಧ ಕಳಚಬೇಕು. ಶಿಕ್ಷಣವು ವೈಚಾರಿಕತೆ, ಪ್ರಶ್ನಿಸುವ ಸಾಮರ್ಥ್ಯ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಸಂವಿಧಾನದ ಆಶಯಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಯುವಜನತೆ ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗೋಷ್ಠಿಯಲ್ಲಿ ಸಿಪಿಎಂ ಕಾರ್ಯದರ್ಶಿ ಕೆ. ಪ್ರಕಾಶ್, ಸಿಪಿಐ ಕಾರ್ಯದರ್ಶಿ ಸಾಥಿ ಸುಂದರೇಶ್ ಭಾಗವಹಿಸಿದ್ದರು. ಹಿರಿಯ ರಾಜಕೀಯ ವಿಮರ್ಶಕ ಡಾ. ಬಿ.ಆರ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.