ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಶಾರದಾ ನವರಾತ್ರಿ; ಶಿವಶರಣರ ವಚನಗಳಿಗೆ ಸಂಗೀತದ ಮೆರುಗು
ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಧ್ಯಾತ್ಮಿಕ ಸ್ಥೈರ್ಯ ಅತ್ಯಗತ್ಯ. ಇತರರನ್ನು ದೂಷಿಸುವ ಬದಲು ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ನಾವೇ ವಹಿಸಿಕೊಳ್ಳಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ಶಾರದಾ ನವರಾತ್ರಿಯ ಎಂಟನೇ ದಿನದ ಅಂಗವಾಗಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ‘ಸತ್ಯಮೇವ ಜಯತೇ’ ಎಂಬ ಮಾತನ್ನು ಉಲ್ಲೇಖಿಸಿ, ಸತ್ಯಕ್ಕೆ ಯಾವಾಗಲೂ ಜಯವಿದೆ, ಆದರೆ ಅದಕ್ಕೆ ಸಮಯ ಬೇಕಾಗುತ್ತದೆ ಎಂದರು.

ಲೋಕಕಲ್ಯಾಣಕ್ಕಾಗಿ ಶಿವನು ಹಾಲಾಹಲ ವಿಷವನ್ನು ಗಂಟಲಿನಲ್ಲಿ ಇರಿಸಿಕೊಂಡಂತೆ, ಜೀವನದಲ್ಲಿ ಎದುರಾಗುವ ಟೀಕೆ, ನಿಂದನೆ ಮತ್ತು ಪ್ರಶಂಸೆಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಎಲ್ಲ ಸಂದರ್ಭಗಳಲ್ಲೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದೇ ಯೋಗಿಯ ಲಕ್ಷಣ ಎಂದು ತಿಳಿಸಿದರು.
ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಸನಾತನ ಧರ್ಮದ ಮೌಲ್ಯಗಳು ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿವೆ. ಹಿರಿಯ ನಾಗರಿಕರು ಸೇರಿದಂತೆ ಯಾರನ್ನೂ ಕಡೆಗಣಿಸದೆ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಿಸಬೇಕು ಎಂದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ಶಿಕ್ಷಣ
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸದ್ಗುರು ಮಧುಸೂದನ ಸಾಯಿ ಉಚಿತ ವೈದ್ಯಕೀಯ ಶಿಕ್ಷಣದ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಹೇಳಿದರು. ಆಧ್ಯಾತ್ಮಿಕ ಮೌಲ್ಯಗಳಿಲ್ಲದ ಜೀವನ ಹಲವು ದುರಂತಗಳಿಗೆ ಕಾರಣವಾಗಬಹುದು ಎಂದರು.
ಜಾತಿ–ಧರ್ಮದ ಹೆಸರಿನಲ್ಲಿ ವಿಭಜನೆ ಬೇಡ
ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ವಿಭಜನೆಯಾಗಬಾರದು. ಸಾಮಾಜಿಕ ನ್ಯಾಯ ಕಲ್ಪಿಸುವಾಗ ದುರ್ಬಲ ವರ್ಗಗಳ ಏಳಿಗೆಗೆ ಆದ್ಯತೆ ನೀಡಬೇಕು ಎಂದರು.
ಉಚಿತ ಶಿಕ್ಷಣ, ವೈದ್ಯಕೀಯ ಸೇವೆ ಮತ್ತು ಔಷಧೋಪಚಾರದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು ತಲುಪಿಸುವ ಕಾರ್ಯವನ್ನು ಶ್ಲಾಘಿಸಿದ ಅವರು, ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಪರಿಕಲ್ಪನೆಯು ವಿಶ್ವಮಾನವತೆಯ ಸಂದೇಶ ಸಾರುತ್ತದೆ ಎಂದು ಹೇಳಿದರು.

ಶಿವಶರಣರ ವಚನಗಳಿಗೆ ಸಂಗೀತದ ಮೆರುಗು
ನವರಾತ್ರಿ ಅಂಗವಾಗಿ ಸಂಜೆ ನಡೆದ ‘ಅನುಭವ ಮಂಟಪ’ ವಚನ ಗಾಯನ ಕಾರ್ಯಕ್ರಮದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಾದಗುರುಕುಲದ ವಿದ್ಯಾರ್ಥಿಗಳು ಹತ್ತು ಶಿವಶರಣರ ವಚನಗಳನ್ನು ಹತ್ತು ವಿಭಿನ್ನ ರಾಗಗಳಲ್ಲಿ ಅರ್ಥವಿವರಣೆಯೊಂದಿಗೆ ಪ್ರಸ್ತುತಪಡಿಸಿದರು.
ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ ಸೇರಿದಂತೆ ಹತ್ತು ಶಿವಶರಣರ ವಚನಗಳನ್ನು ಸಂಗೀತದ ಮೂಲಕ ಪರಿಚಯಿಸಲಾಯಿತು. ಹಡಪದ ಅಪ್ಪಣ್ಣನ ‘ಅಂಗವ ಮರೆದು ಲಿಂಗವ ಕೂಡಿ’ ವಚನವನ್ನು ಮಾಂಡ್ ರಾಗದಲ್ಲಿ ಹಾಗೂ ಆಯ್ದಕ್ಕಿ ಲಕ್ಕಮ್ಮನ ‘ಗರ್ವದಿಂದ ಮಾಡುವ ಭಕ್ತಿ’ ವಚನವನ್ನು ಶುದ್ಧ ಸಾರಂಗ ರಾಗದಲ್ಲಿ ಹಾಡಲಾಯಿತು. ವಚನಗಳ ತಾತ್ವಿಕ ಸಂದೇಶವನ್ನು ಸಂಗೀತದ ಮೂಲಕ ಪ್ರಸ್ತುತಪಡಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.