ಮುದ್ರಣ ಶಾಯಿಯಲ್ಲಿ ಹಾನಿಕಾರಕ ರಾಸಾಯನಿಕ; ಪತ್ರಿಕೆಯಲ್ಲಿ ಆಹಾರ ಬಡಿಸಬೇಡಿ ಎಂದು FSSAI ಎಚ್ಚರಿಕೆ
ನವದೆಹಲಿ: ಆಹಾರವನ್ನು ಸುತ್ತಲು ಅಥವಾ ಬಡಿಸಲು ಪತ್ರಿಕೆಗಳನ್ನು ಬಳಸಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ದೇಶಾದ್ಯಂತ ಆಹಾರ ಮಾರಾಟಗಾರರು ಮತ್ತು ಸಂಸ್ಥೆಗಳಿಗೆ ಸೂಚನೆ ನೀಡಿದೆ. ಪತ್ರಿಕೆ ಬಳಕೆಯಿಂದ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಈ ಸಲಹೆ ನೀಡಲಾಗಿದೆ. FSSAI ಮತ್ತು ಬೃಹನ್‌ಮುಂಬೈ ಮಹಾನಗರ ಪಾಲಿಕೆ (MCGM) ಜಂಟಿಯಾಗಿ ಇಂತಹ ಪದ್ಧತಿಯನ್ನು ತಡೆಯಲು ಕ್ರಮ ಕೈಗೊಂಡಿವೆ.
ಪತ್ರಿಕೆಗಳಲ್ಲಿ ಬಳಸುವ ಮುದ್ರಣ ಶಾಯಿಯಲ್ಲಿ ಹಾನಿಕಾರಕ ರಾಸಾಯನಿಕಗಳು, ವರ್ಣದ್ರವ್ಯಗಳು ಹಾಗೂ ಸೀಸದಂತಹ ಭಾರಲೋಹಗಳು ಇರುತ್ತವೆ. ಬಿಸಿ ಅಥವಾ ಎಣ್ಣೆಯುಕ್ತ ಆಹಾರದ ಸಂಪರ್ಕಕ್ಕೆ ಬಂದಾಗ ಈ ವಿಷಕಾರಿ ಅಂಶಗಳು ಆಹಾರಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು FSSAI ತಿಳಿಸಿದೆ.

ಅಲ್ಲದೆ, ಪತ್ರಿಕೆಗಳು ಸಾಗಣೆ ಮತ್ತು ವಿತರಣೆಯ ವೇಳೆ ಅನೈರ್ಮಲ್ಯ ಪರಿಸ್ಥಿತಿಗಳಿಗೆ ಒಳಗಾಗುವುದರಿಂದ ರೋಗಕಾರಕ ಜೀವಾಣುಗಳನ್ನು ಹೊತ್ತುಕೊಂಡಿರಬಹುದು. ಇದರಿಂದ ಆಹಾರಜನ್ಯ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ (ಪ್ಯಾಕೇಜಿಂಗ್) ನಿಯಮಗಳು-2018ರ ಪ್ರಕಾರ, ಆಹಾರವನ್ನು ಸಂಗ್ರಹಿಸಲು, ಸುತ್ತಲು ಅಥವಾ ಬಡಿಸಲು ಪತ್ರಿಕೆಗಳು ಹಾಗೂ ಅನುಮೋದನೆ ಪಡೆಯದ ವಸ್ತುಗಳ ಬಳಕೆ ನಿಷೇಧಿಸಲಾಗಿದೆ.
ಈ ನಿರ್ದೇಶನವು ಬೀದಿ ಬದಿ ಆಹಾರ ವ್ಯಾಪಾರಿಗಳು, ಹೋಟೆಲ್‌ಗಳು, ಕ್ಲೌಡ್ ಕಿಚನ್‌ಗಳು, ಕ್ಯಾಟರರ್‌ಗಳು, ತ್ವರಿತ ಸೇವಾ ರೆಸ್ಟೋರೆಂಟ್‌ಗಳು ಮತ್ತು ಮೊಬೈಲ್ ಆಹಾರ ಮಾರಾಟಗಾರರು ಸೇರಿದಂತೆ ಎಲ್ಲ ಆಹಾರ ಉದ್ಯಮಗಳಿಗೆ ಅನ್ವಯವಾಗುತ್ತದೆ.
ಗ್ರಾಹಕರೂ ಸಹ ಪತ್ರಿಕೆಯಲ್ಲಿ ಸುತ್ತಿದ ಅಥವಾ ಬಡಿಸಲಾದ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು FSSAI ಮನವಿ ಮಾಡಿದೆ. ಆಹಾರ ಸುರಕ್ಷತೆ ಕಾಯ್ದೆ-2006ರಡಿ ಪರಿಶೀಲನೆ ಮತ್ತು ಜಾರಿ ಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತಂತೆ, ದಿನಪತ್ರಿಕೆಗಳಲ್ಲಿ ಕರಿದ ಆಹಾರವನ್ನು ಬಡಿಸುವುದು ಅಥವಾ ಸುತ್ತುವುದು ನಿರುಪದ್ರವವೆಂದು ತೋರುತ್ತದೆ, ಆದರೆ ಇದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಹೊಂದಿದೆ ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಮಾಹಿತಿ ಹಂಚಿಕೊಂಡಿರುವ FSSAI, ಪತ್ರಿಕೆಯ ಮುದ್ರಣ ಶಾಯಿಯು ವಿಷಕಾರಿ ರಾಸಾಯನಿಕಗಳು ಮತ್ತು ಸೀಸದಂತಹ ಭಾರ ಲೋಹಗಳನ್ನು ಹೊಂದಿರುತ್ತದೆ. ಬಿಸಿ ಅಥವಾ ಜಿಡ್ಡಿನ ಆಹಾರವು ಮುದ್ರಣದ ಸಂಪರ್ಕಕ್ಕೆ ಬಂದಾಗ, ಈ ವಿಷಕಾರಿ ವಸ್ತುಗಳು ನೇರವಾಗಿ ಊಟಕ್ಕೆ ಸೋರಿಕೆಯಾಗುತ್ತವೆ ಎಂದು ಹೇಳಿದೆ.
Serving or wrapping fried food in newspapers might seem harmless, but it carries serious health risks.
Newspaper printing ink contains toxic chemicals & heavy metals like lead. When hot or greasy food comes into contact with the print, these toxins leach directly into the meal. pic.twitter.com/XAsqdxGW9Y— FSSAI (@fssaiindia) June 6, 2026